29 May 2011

ಆಡುಗೆ ಮನೆ ಆಟಿಕೆ

ಒಲೆಯಮೇಲೆ ಹಾಲು ಕಾಯುತಿತ್ತು, ಅದು ಉಕ್ಕುವ ಹಂತ ಸಮೀಪಿಸುತಿತ್ತು. ಅಷ್ಟರಲ್ಲಿ ಮೊಬೈಲ್ ಕರೆಯಿತು. ಮೊಬೈಲ್ ನಲ್ಲಿ ಮಾತನಾಡುತ್ತ ಮೈಮರೆತ ವ್ಯಕ್ತಿ, ಇತ್ತ ಹಾಲು ಉಕ್ಕುವುದನ್ನು ಗಮನಿಸಲೇಯಿಲ್ಲ.  ಸುಟ್ಟ ವಾಸನೆ ಹರಡುತ್ತಿದ್ದಂತೆ ಎಚ್ಚೆತ್ತ ಅವರು ದಿಢೀರನೆ ಒಲೆಯ ಕಡೆಗೆ ಓಡಿದರು. ಅಷ್ಟುಹೊತ್ತು ಅದರ ಮುಂದೆ ನಿಂತ್ತಿದ್ದರೂ ಉಕ್ಕದ ಹಾಲು ಅತ್ತ ಹೋಗಿ ಬರುವಷ್ಟರಲ್ಲಿ ಉಕ್ಕಿತಲ್ಲ ಎಂದು ತನ್ನ ಮಂಕು ಬುದ್ಧಿಗೆ ಶಪಿಸುತ್ತಾ ಆ ಒಲೆಯ ಮೂಲೆಗಳಲ್ಲಿ ನುಸುಳಿದ್ದ ಹಾಲನ್ನು ಒರೆಸಿ, ಶುದ್ಧ ಮಾಡುವರು. ಇಂತಹ ಸನ್ನಿವೇಶ ಬಹುಷಃ ಎಲ್ಲರ ಮನೆಯಲ್ಲೂ ದಿನನಿತ್ಯದ ಸಂಗತಿ. ಮನೆಯಲ್ಲಿನ ಹೆಂಗಸರು, ರುಚಿ-ರುಚಿಯಾದ ಅಡುಗೆ ಮಾಡಿ ಬಡಿಸಿದಾಗ ಅದನ್ನು ಸವೆಯುವುದು ಬಲು ಸುಲಭ.  ಆದರೆ ಅದರ ಹಿಂದಿನ ಪರಿಶ್ರಮ ಏನು ಎಂಬುದು ಅದನ್ನು ಅನುಭವಿಸಿದವರಿಗೆ ಗೊತ್ತು.  ಅಡುಗೆ ಮನೆಯ ಆಗು-ಹೋಗುಗಳು ಗಂಡಸರಿಗಿಂತ ಹೆಂಗಸರಿಗೆ ಹೆಚ್ಚು ತಿಳಿದಿರುವಂತದ್ದು.  ಆದರೆ ಬ್ರಹ್ಮಚಾರಿಗಳಾಗಿ ಮನೆಯಿಂದ ಹೊರಗೆ ಓದಲೋ, ಕೆಲಸ ಮಾಡಲೋ ಇದ್ದು, ತಮ್ಮ ಮನೆಯಲ್ಲೇ ಸ್ವತಃ ಅಡುಗೆ ಮಾಡುವಾಗ ಅದರ ಕಷ್ಟ ಸುಖಗಳ ಅರಿವಾಗುತ್ತದೆ.  ಮಾಡಿದ ಅಡುಗೆ ರುಚಿಯಾಗಿದ್ದರೆ, ಆಹಾ ಏನು ರುಚಿಯಾಗಿದೆ, ಅದ್ಭುತ ಎಂದೆಲ್ಲಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ.  ಆದರೆ ಮಾಡಿದ ಅಡುಗೆ ರುಚಿಸದಿದ್ದರೆ, ಅಯ್ಯೋ ಜೊತೆಯಲ್ಲಿ ಯಾರಾದರು ಅಡುಗೆ ಮಾಡಿ ಹಾಕುವವರು ಇರಬಾರದಿತ್ತೆ; ಈ ಕಷ್ಟ ಇನ್ನೂ ಎಷ್ಟು ದಿನ ಅನುಭವಿಸಬೇಕೋ ಎನ್ನುವುದುಂಟು.  ಅಡುಗೆ ಮಾಡುವುದು ಒಮ್ಮೊಮ್ಮೆ ಬೇಸರವೆನಿಸಿದರೂ, ಅದರಲ್ಲಿನ ಮಜವೇ ಬೇರೆ.  ಶುರುವಿನಲ್ಲಿ ಗೊತ್ತಿರುವ ಒಂದೋ, ಎರಡೋ ಅಡುಗೆಯನ್ನೇ ಮಾಡಲು ಆರಂಭಿಸಿ, ನಂತರ ಹೊಸ ರುಚಿಯನ್ನು ಪ್ರಯೋಗ ಮಾಡುತ್ತಾರೆ.  ಅಡುಗೆ ಕಲಿಯುವ ಹಂತದಲ್ಲಿ ಎಷ್ಟು ಅಕ್ಕಿಗೆ ಎಷ್ಟು ನೀರು ಹಾಕಬೇಕು, ಸಾರು, ಹುಳಿಗೆ ಎಷ್ಟು ಉಪ್ಪು ಹಾಕಬೇಕು ಎನ್ನುವ ಅಂದಾಜು ಗೊತ್ತಿಲ್ಲದೇ ಹೆಚ್ಚು ಕಡಿಮೆ ಆಗುವುದುಂಟು.  ಹಿಂದೆ ಮಡಿಕೆಯಲ್ಲಿ ಶುರುವಾದ ಅಡುಗೆ, ಇಂದು ನಾನ್ ಷ್ಟಿಕ್ ತನಕ ಬೆಳೆದು ಬಂದಿದೆ.  
  ನಾವು ಸೂಕ್ಷ್ಮವಾಗಿ ಅಡುಗೆ ಮನೆಯಲ್ಲಿ ಮೂಡುವ ಶಬ್ಧವನ್ನು ಗಮನಿಸಿದರೆ, ಸಂಗೀತದ ಸಾಗರದಲ್ಲೇ ಇದ್ದಂತೆ ಗೋಚರವಾಗುತ್ತದೆ.  ಅನ್ನ ಬೇಯಿಸುವ ಕುಕ್ಕರಿನ ಶೀಟಿ ಅದರದೇ ಆದ ಶೈಲಿಯಲ್ಲಿ ಮೂಡುತ್ತದೆ.  ಮನೆಯ ಯಾವ ಮೂಲೆಯಲ್ಲಿದ್ದರೂ ಆ ಶೀಟಿಯ ಸದ್ದು ಕೇಳುತ್ತದೆ.  
  ಇನ್ನೊಂದೆಡೆ, ಮಾಡಿದ ಸಾರು, ಸಾಂಬಾರುಗಳಿಗೆ ಹಾಕುವ ಒಗ್ಗರಣೆಯ ವೈಚಿತ್ರತೆ ಹೇಳತೀರದು.  ಕಾದ ಎಣ್ಣೆಗೆ ಸಾಸಿವೆ ಬಿದ್ದಾಗ ಮಾಡುವ ಚಿಟಿ-ಚಿಟಿ ಸದ್ದು ಸಪ್ತಸ್ವರಗಳ ಸಂಗಮದಂತೆ ವ್ಯಕ್ತವಾಗುತ್ತದೆ.  ಮತ್ತೊಂದೆಡೆ ಒರಳಿನಲ್ಲಿ ರುಬ್ಬುವಾಗ ಮೂಡುವ ಗುಡುಗುಡು ಸದ್ದು ಕೇಳಲು ಕಿರಿಕಿರಿ ಎನಿಸಿದರೂ, ರುಬ್ಬಿ ಮಾಡಿದ ಅಡುಗೆಯ ರುಚಿಗೆ ಸಾಟಿ ಬೇರೊಂದಿಲ್ಲ.  ಚನ್ನಾಗಿ ಕಾದಿರುವ ತವದಮೇಲೆ ದೋಸೆಯ ಹಿಟ್ಟನ್ನು ಹರಡಿದಾಗ ಮೂಡುವ ಸದ್ದಿಗೆ ಅದರದೇ ಆದ ವೈಶಿಷ್ಟ್ಯತೆ ಇದೆ.  ತರಕಾರಿಯನ್ನು ಹೆಚ್ಚಿ ನೀರಿನಲ್ಲಿ ಬೇಯಲು ಇಟ್ಟಾಗ, ಅದು ಕುದಿಯುವ ರೀತಿಯೇ ವಿಶೇಷ.  ಹೀಗೆ, ಅನೇಕ ಶಬ್ಧ ಮಾದುರ್ಯಗಳನ್ನು ಅಡುಗೆ ತನ್ನಲ್ಲಿ ಅಡಗಿಸಿಕೊಂಡಿದೆ.   ಅಡುಗೆ ಮಾಡುವಾಗ ಎಲ್ಲಾ ಪದಾರ್ಥಗಳನ್ನು ಸರಿಯಾಗಿ ಹಾಕಿದರೆ ಅದರಿಂದ ಮೂಡುವ ರುಚಿ ಅದ್ಭುತ. ಆದರೆ ಯಾವುದಾದರು ಒಂದು ಪದಾರ್ಥ ಹೆಚ್ಚು ಕಡಿಮೆಯಾದರೆ ಅದನ್ನು ಎಷ್ಟೇ ಪರದಾಡಿದರು ಸರಿಮಾಡಲಾಗುವುದಿಲ್ಲ ಮತ್ತು ಅದಕ್ಕೆ ಅದರ ಪ್ರತ್ಯೇಕ ರುಚಿಯೂ ಬರುವುದಿಲ್ಲ. ಇನ್ನೊಂದೆಡೆ, ಅಡುಗೆ ಮಾಡುವಾಗ ಅನೇಕ ಸಲಕರಣೆಗಳನ್ನು ಬಳಸುತ್ತೇವೆ.  
ಒಂದು ಚಮಚದಿಂದ ಹಿಡಿದು ಅನ್ನದ ಕೈವರೆಗೂ ಬಗೆ ಬಗೆಯ ಹಿಡಿಗಳನ್ನು ಬಡಿಸಲು ಬಳಸುತ್ತೇವೆ. ಅವುಗಳ ಆಕಾರಗಳೇ ನೋಡಲು ಚನ್ನ.  ಆ ಸಲಕರಣೆಗಳನ್ನು ಪಾತ್ರೆಯಲ್ಲಿ ಆಡಿಸುವಾಗ ಅಡುಗೆಯಲ್ಲಿ ಮೂಡುವ ಸದ್ದಿಗೆ ತಾಳ ಹಾಕಿದಂತಿರುತ್ತದೆ.  ಇತ್ತ ಅಡುಗೆ ಹೇಗೋ ಮಾಡಿಬಿಡಬಹುದು, ಆದರೆ ಅಡುಗೆ ಮಾಡಿದ ಪಾತ್ರೆಗಳನ್ನು ತೊಳೆಯುವುದು ಒಂದು ಹರಸಾಹಸವೇ ಸರಿ.  ಅದರಲ್ಲೂ ಮಾಡಿದ ಅಡುಗೆ ಸೀದು ಕರಕಲಾಯಿತೆಂದರೆ ಆ ಕರೆಯನ್ನು ತಿಕ್ಕಿ ತೆಗೆಯುವುದರೊಳಗೆ ಕೈಗಳೆರಡು ಸೋತುಹೋಗಿರುತ್ತವೆ.  ಈ ರೀತಿ ಅನೇಕ ತಪ್ಪು ಸರಿಗಳು, ಸಂಗೀತ ಸ್ವರಗಳು ಮಾಡುವ ಅಡುಗೆಯಲ್ಲಿ, ಅಡುಗೆಮನೆಯಲ್ಲಿ ಅಡಕವಾಗಿದೆ.  ನಾವು ಮಾಡುವ ಅಡುಗೆಯಲ್ಲಿ ಯಾವ ಸ್ವರವೂ ತಪ್ಪದಂತೆ ನಿಗಾ ವಹಿಸಿದರೆ, ಆ ಅಡುಗೆಯೂ ಸ್ವಾದಿಷ್ಟವು, ರುಚಿಕರವು ಆಗಿದ್ದು ಹಸಿವನ್ನು ನೀಗಿಸುತ್ತದೆ.  ನಂತರ ಅನ್ನದಾತೋ ಸುಖೀ ಭವ ಎಂದು ಊಟದಿಂದ ಎದ್ದು ಕೈ ತೊಳೆದು ಸುಧಾರಿಸಿಕೊಳ್ಳಬಹುದು.  

4 comments:

 1. Howdu santhosh.

  You are true. But I have one small doubt, maduve aago yochne bandide anisthide.

  ReplyDelete
 2. Naga,

  Thanks for the comments. Maduve aago yochane sadyakke illa. ee article adakke sambandhisiddu alla.

  ReplyDelete
 3. Nija Santosh, aduge maaduvalli sangeeta kanda nimma kale mechchabeku..

  ReplyDelete
 4. Pradeep Sir,

  Thank you for the comments. Keep visiting.

  ReplyDelete