26 May 2011

ಅಜ್ಜನ ನೆನಪು ಇಂದಿಗೂ ಹೊಳಪು

ಹಲವು ವರ್ಷಗಳ ಸಕ್ಕರೆ ಕಾಯಿಲೆಯಿಂದ ದೇಹದಲ್ಲಿ ಶಕ್ತಿ ಕುಗ್ಗುತಿತ್ತು; ಕಣ್ಣಿನ ದೃಷ್ಟಿ ಕ್ಷೀಣಿಸುತಿತ್ತು .  ಕೊಂಚದೂರದಲ್ಲಿ ಯಾರಾದರು ಹಾಯ್ದುಹೋಗುವುದನ್ನು ಕಂಡರೆ ಅದು ಯಾರೆಂಬ ಸ್ಪಷ್ಟತೆ ಇರಲಿಲ್ಲ.  ಅವರ ನಿತ್ಯಕರ್ಮಗಳೆಲ್ಲ ಮಲಗುವ ಕೋಣೆಯಲ್ಲೇ ಆಗುತಿತ್ತು. ಆದರೆ ಪ್ರತಿದಿನ ಸಂಜೆ ೫ ಘಂಟೆ ಆಗುತ್ತಿದ್ದಂತೆ ಅವರ ಸುಪ್ತ ಮನಸ್ಸಿಗೆ ಮೊಮ್ಮಗ ಶಾಲೆ ಮುಗಿಸಿ ಮನೆಗೆ ಬಂದದ್ದು ಗೋಚರವಾಗುತಿತ್ತು.  ಅವರ ಪ್ರೀತಿಯ ಮೊಮ್ಮಗ ಮನೆಗೆ ಬಂದು ತನ್ನ ಸೈಕಲ್ ಒಳಗೆ ನಿಲ್ಲಿಸುತ್ತಿದ್ದಂತೆ ಮೇಲಿನ ಅವರ ಕೋಣೆಯಿಂದ ಮೊಮ್ಮಗನನ್ನು ಕರೆಯುತ್ತಿದ್ದರು.  ಇತ್ತ ಅವರ ಹೆಂಡತಿ ಮತ್ತು ಸೊಸೆ, ಅಯ್ಯೋ ಈಗ ತಾನೇ ಒಳಗೆ ಬರುತ್ತಿದ್ದಾನೆ, ಕೈ, ಕಾಲು ತೊಳೆದು ಬರುತ್ತಾನೆ ಎಂದು ಜವಾಬು ನೀಡುತ್ತಿದ್ದರು.  ನಂತರ, ನಾವು ದಿನವೆಲ್ಲ ತಿಂಡಿ ಕೊಡಲೇ, ಊಟ ಕೊಡಲೇ ಎಂದು ಎಷ್ಟು ಜೋರಾಗಿ ಕೂಗಿ ಕೇಳಿದರು ಅವರಿಗೆ ಕೇಳುತ್ತಿಲ್ಲವೆಂಬಂತೆ ಉತ್ತರ ಕೊಡದೆ ಸುಮ್ಮನಿರುತ್ತಿದ್ದರು.  ಆದರೆ ಇವನು ಮನೆಯೊಳಗೆ ಬರುತ್ತಿದ್ದಂತೆ ಅದು ಹೇಗೆ ಅವರಿಗೆ ಗೊತ್ತಾಗುತ್ತದೆ ನೋಡಿ ಎಂದು ಮಾತನಾಡಿಕೊಳ್ಳುತ್ತಿದ್ದರು.  ಇದನ್ನೇ ಮಮತೆ, ವಾತ್ಸಲ್ಯ, ಪ್ರೀತಿ, ಆತ್ಮೀಯತೆ ಎಂದೆಲ್ಲಾ ಕರೆಯುತ್ತಾರೆ.  ಈ ಮೇಲಿನ ಘಟನೆಯಲ್ಲಿದ್ದ ಮೊಮ್ಮಗ ಸ್ವತಃ ನಾನೇ; ಇದು ನಮ್ಮ ಮನೆಯಲ್ಲೇ ನಡೆಯುತ್ತಿದ್ದ ದೈನಂದಿನ ಘಟನೆ.  ಅವರು ನನ್ನ ಪ್ರೀತಿಯ ಅಜ್ಜ.  

 ಅವರನ್ನು ಕಾಣಲು ಮೊದಲ ಮಹಡಿಯಲ್ಲಿದ್ದ ಅವರ ಕೋಣೆಗೆ ಹೋದರೆ, ಇವತ್ತಿನ ಶಾಲೆ ಮುಗಿಯಿತೇ, ಅಲ್ಲಿ ಇವತ್ತು ಏನು ವಿಶೇಷ ಎಂದು ಕೇಳುತ್ತ, ಅವರ ಕಪಾಟಿನಲ್ಲಿ ನಮಗಾಗಿ ಇಟ್ಟಿದ್ದ ಬಿಸ್ಕುಟ್ ಪೊಟ್ಟಣದಿಂದ ಒಂದೋ, ಎರಡೋ ಬಿಸ್ಕುಟ್ ತೆಗೆದುಕೋ ಎನ್ನುತ್ತಿದ್ದರು.  ಅವರು ಕಾಲವಾಗಿ ನಾಳೆಗೆ ಬರೋಬ್ಬರಿ ಎಂಟು ವರುಷಗಳೇ ಆದವು.  ಇಂದಿಗೂ ಆ ದಿನಗಳನ್ನು ನೆನಪಿಸಿಕೊಂಡರೆ ದುಃಖ ಉಮ್ಮಳಿಸಿ ಬರುತ್ತದೆ.  ಈ ಲೇಖನ ಬರೆಯುವಾಗಲೂ ನನಗೆ ಗೊತ್ತಿಲ್ಲದಂತೆ ನನ್ನ ಕಣ್ಣುಗಳು ಅನೇಕ ಬಾರಿ ಕಣ್ಣಿರು ಹರಿಸಿತು.  ಇತ್ತೀಚಿನ ಕೆಲವು ವರ್ಷಗಳಲ್ಲಿ ತುಂಬು ಸಂಸಾರ, ಒಟ್ಟು ಕುಟುಂಬ ಎನ್ನುವುದು ಬರಿಯ ಕಲ್ಪನೆಯಾಗಿ ಉಳಿದಿದೆ.  ಆ ತುಂಬು ಕುಟುಂಬಗಳಲ್ಲಿನ ಒಂದು ಆತ್ಮೀಯತೆ, ಹರಟೆ, ಮಾತುಕತೆ, ಜಗಳ, ಸಂಭ್ರಮ ಎಲ್ಲವೂ ಒಂದು ರೀತಿ ಖುಷಿ ನೀಡುತ್ತಿದ್ದವು.  ಅದರಲ್ಲೂ, ಅಜ್ಜ, ಅಜ್ಜಿ ಜೊತೆಗಿನ ಸಂವಾದ, ಅವರು ಹೇಳುತ್ತಿದ್ದ ಕಥೆಗಳನ್ನು ಕೇಳಿ ಆನಂದಿಸುವುದು,  ಕೆಲವೊಮ್ಮೆ ಅವರನ್ನು ಕೀಟಲೆ ಮಾಡಿ ತಿಂದ ಬೈಗುಳಗಳು ಹೀಗೆ ಅನೇಕ ಬಗೆಯ ಘಟನೆಗೆ ಸಾಕ್ಷಿಯಾಗುತ್ತಿತ್ತು.  ಇಂದು ಜನರು ಮದುವೆಯಾದ ಕೂಡಲೇ ಬೇರೆ ಮನೆಮಾಡಿ ತಮ್ಮವರಿಂದ ದೂರವಿರಲು ಬಯಸುತ್ತಾರೆ.  ಮನೆಯಲ್ಲಿ ಟಿವಿ, ಕಂಪ್ಯೂಟರ್ ಗಳು ಬಂದು ಪರಸ್ಪರ ಮಾತುಕತೆಗಳೇ ನಿಂತುಹೋಗಿವೆ.  ಸಂಬಂಧಗಳ ಆತ್ಮೀಯತೆ ನಾಪತ್ತೆಯಾಗಿದೆ.  ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮನೆ ಇಂದಿಗೂ ತುಂಬು ಕುಟುಂಬದ ರಸದೌತಣಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಲು ನನಗೆ ಹೆಮ್ಮೆಯಾಗುತ್ತದೆ.  ಇಂತಹ ತುಂಬು ಕುಟುಂಬಕ್ಕೆ ಬುನಾದಿ ಹಾಕಿಕೊಟ್ಟ ನನ್ನ ಅಜ್ಜನ ಕಾಲದ ಕೆಲವು ಘಟನೆಗಳನ್ನು ಮೆಲಕು ಹಾಕಿ ನಿಮಗೂ ಅದರ ಸವಿಯನ್ನು ಬಡಿಸುತ್ತೇನೆ.  ನನ್ನ ಅಜ್ಜ,  ಚಿಕ್ಕ ವಯಸ್ಸಿನಿಂದಲೂ ಎಲ್ಲಾ ಕೆಲಸಗಳನ್ನು ಬಲ್ಲಂತ ನಿಪುಣರು.  ಅವರು ಮಾಡುತ್ತಿದ್ದ ಬಿಸಿಬೇಳೆ ಬಾತ್, ಮತ್ತು ಕಾಫಿಯ ರುಚಿಯನ್ನು ಸವೆದಂತ ಅನೇಕ ಬಂಧು-ಮಿತ್ರರು ಅಂತಹ ಅದ್ಭುತ  ರುಚಿಯನ್ನು ಇಂದಿಗೂ ಬೇರೆಲ್ಲೂ ತಿಂದಿಲ್ಲಾ ಎಂದು ಬಣ್ಣಿಸುತ್ತಿದ್ದರು.  ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಾಲಯ ಅಧಿಕಾರಿಯಾಗಿಯೂ ಕೆಲ ಕಾಲ ಕಾರ್ಯನಿರ್ವಹಿಸಿದ್ದರು.  ಆ ಸಂದರ್ಭದಲ್ಲಿ ಅನೇಕ ಕವಿಗಳ, ಸಾಹಿತಿಗಳ ಸಂಪರ್ಕದಲ್ಲಿದ್ದು, ಡಿವಿಜಿ ಮೊದಲ್ಗೊಂಡು ಅನೇಕ ಹಿರಿಯ ಸಾಹಿತಿಗಳ ಜೊತೆಯಲ್ಲಿ ಕೆಲಸ ನಿರ್ವಹಿಸಿದ್ದರು.  ಬೆಂಗಳೂರಿನ ಗೋಖಲೆ ಸಂಸ್ಥೆ ನಿರ್ಮಾಣದ ಸಮಯದಲ್ಲಿ ಡಿವಿಜಿ ಅವರ ಜೊತೆಯಲ್ಲೇ ಇದ್ದು ಅದರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಪುಸ್ತಕ ಪ್ರೇಮಿಯಾಗಿದ್ದ ಅವರು, ಮನೆಯಲ್ಲಿ ಕಲೆ, ಸಾಹಿತ್ಯ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಹತ್ತು ಹಲವು ಬಗೆಯ ಪುಸ್ತಕಗಳನ್ನು ಸಂಗ್ರಹಿಸಿ ಓದುತ್ತಿದ್ದರು.  ನನಗೆ ತಿಳಿದಿರುವ ಹಾಗೆ, ನಮ್ಮ ಮನೆಯಲ್ಲಿ ಅವರ ಪುಸ್ತಕ ಸಂಗ್ರಹಣೆ ಸುಮಾರು ೩೦೦೦ ಇರಬಹುದು.  ಹೀಗೆ ಓದಿದ್ದನೆಲ್ಲಾ ಆಗಾಗ್ಗೆ ಮೆಲಕು ಹಾಕುತ್ತಿದ್ದರು.  ಡಿವಿಜಿಯವರ ಮಂಕುತಿಮ್ಮನ ಕಗ್ಗವಂತು ಅದರ ಅರ್ಥಸಹಿತವಾಗಿ ಸಂಪೂರ್ಣ ಬಾಯಿಪಾಟ ಮಾಡಿದ್ದರು.  ಅಂತೆಯೇ ಅವರ ಜ್ಞಾಪಕ ಶಕ್ತಿ ಅಪಾರವಾಗಿತ್ತು.  ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಾಲಯ ಅಧಿಕಾರಿಯಾಗಿದ್ದಾಗ ಒಬ್ಬ ಯುವಕ ಆ ಗ್ರಂಥಾಲಯದಿಂದ ಒಂದು ಪುಸ್ತಕವನ್ನು ಓದಲು ಪಡೆದಿದ್ದರು.  ಅದನ್ನು ಅವರು ಹಿಂದಿರುಗಿಸದೆ ಅದನ್ನು ನಾನು ವಾಪಸ್ಸು ಮಾಡಿರುವುದಾಗಿ ವಾದಿಸಿದಾಗ ಆತನಿಗೆ ಕಪಾಳ ಮೊಕ್ಷಮಾಡಿ ನಾಳೆ ಬೆಳಿಗ್ಗೆ ಆ ಪುಸ್ತಕ ನಿನ್ನಿಂದ ಬರದಿದ್ದರೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದ್ದರು.  ಅಂದು ನನ್ನಜ್ಜನಿಂದ ಪಾಠ ಕಲಿತ ಅವರು ನನ್ನಜ್ಜನನ್ನು ಗುರುವೆಂದು ಭಾವಿಸಿ ಅವರ ಸ್ನೇಹಿತರಾದರು. ಅವರು ನನ್ನ ಅಜ್ಜನನ್ನು ಭೇಟಿ ಮಾಡಲು ಬಂದಾಗಲೆಲ್ಲಾ ತಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ನಮಸ್ಕರಿಸುತ್ತಿದ್ದರು. ಈ ಪ್ರಸಂಗವನ್ನು ಅಂದು ಏಟು ತಿಂದ ನನ್ನ ಅಜ್ಜನ ಸ್ನೇಹಿತರೆ ಒಮ್ಮೆ ನಮ್ಮ ಮನೆಗೆ ಬಂದಿದ್ದಾಗ ವಿವರಿಸಿದರು.  ಮುಂದೆ ನನ್ನ ಅಜ್ಜ ಓದಿದ ಶಾಲೆಯಲ್ಲಿ ಅವರ ಸಹಪಾಠಿಯಾಗಿದ್ದ ಇನ್ನೊಬ್ಬ ಸ್ನೇಹಿತರು ತಮ್ಮ ಉನ್ನತ ಶಿಕ್ಷಣ ಮುಗಿಸಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಡಿವಿಜಿಯವರನ್ನು ಒಮ್ಮೆ ಭೇಟಿ ಮಾಡಬೇಕೆಂದು ಮನಸ್ಸಾದಾಗ, ನನ್ನ ಅಜ್ಜನ ಬಳಿ ಬಂದು ಡಿವಿಜಿಯವರನ್ನು ಭೇಟಿ ಮಾಡಿಸಿ ಎಂದು ಕೇಳಿದರು.  ಆವೇಳೆಗೆ ನನ್ನ ಅಜ್ಜ ಡಿವಿಜಿ ಅವರ ಆಪ್ತರಾಗಿದ್ದರು.  ಆಗಲಿ ಎಂದು  ಸ್ನೇಹಿತನಿಗೆ ಒಂದು ದಿನ ಹೋಗಿ ಡಿವಿಜಿಯವರನ್ನು ಭೇಟಿಮಾಡಲು ಹೇಳಿದ್ದರು.  ಆ ಸ್ನೇಹಿತರು, ಸ್ವಲ್ಪ ಸಮಯ ಡಿವಿಜಿಯವರೊಂದಿಗೆ ಮಾತನಾಡಿದ ಬಳಿಕ, ಡಿವಿಜಿಯವರು ಇವರನ್ನು ಕುರಿತು "ನೀವು ಇಷ್ಟೆಲ್ಲಾ ವಿಷಯ ತಿಳಿದುಕೊಂಡಿರುವುದು ಸಂತೋಷ, ಆದರೆ ಇದರ ಜೊತೆಯಲ್ಲಿ ಸ್ವಲ್ಪ ಇಂಗ್ಲಿಷ್ ಕೂಡ ಕಲಿತ್ತಿದ್ದರೆ ಚನ್ನಾಗಿರುತಿತ್ತು" ಎಂದಾಗ ಅವರು ನನಗೆ ಇಂಗ್ಲಿಷ್ ಕೂಡ ಬರುತ್ತದೆ ನಾನು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದಾಗ, ಡಿವಿಜಿ ಅವರು ಹಾಗಾದರೆ ಸರಿ ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟರಂತೆ.  ಈ ಪ್ರಸಂಗವನ್ನು ಮನೆಗೆ ಬಂದು ಅವರು ನನ್ನ ಅಜ್ಜನ ಬಳಿ ಹೇಳಿದಾಗ, ನನ್ನ ಅಜ್ಜ ಅವರಿಗೆ "ನಿನ್ನನ್ನು ಯಾರು ಡಿವಿಜಿಯವರ ಬಳಿ ಅಷ್ಟು ಅಚ್ಚ ಕನ್ನಡದಲ್ಲಿ ಮಾತನಾಡಲು ಹೇಳಿದವರು ಎಂದು ಗುಡುಗಿದರಂತೆ." ಇನ್ನಷ್ಟು  ಕುತೂಹಲಕಾರಿ ಘಟನೆಗಳೊಂದಿಗೆ ಮುಂದಿನ ಲೇಖನಿಯಲ್ಲಿ ಮತ್ತೆ ನಿಮ್ಮ ಬಳಿ ಬರುತ್ತೇನೆ..........

9 comments:

 1. good one.. nim thaatha bagge nangu gourava jaasthi ide, avaru matanadisutdda reethi, nanage tumba khushi koduthithu...if u hv met hm atleast its never easy to forget his face...a khale ithu avrige.. ur lucky to hav hm as ur GF!! i knw very well that he has a lot of influence on you!!

  ReplyDelete
 2. DVG avrjothe close agidru andre...super great guruve...munchene helbardhitha..innu jaasthi time spend madthide avrjothe!! anyways ..keep writing about that great man!

  ReplyDelete
 3. Great thatha!! 3000 books ittu avara library li andrene amazing. avra abhiruchigalanna naanu ninnalli nodta idini. adke helodu maneyalli hiriyaru melpankthi haakikodabeku anta.

  Hats off to ajja!!!

  ReplyDelete
 4. Sumi,

  Thanks kano. Ninage nanna tathana mele iro gourava nodi kushi aithu.

  ReplyDelete
 5. Nags,

  Thanks for the comment. Keep reading.

  ReplyDelete
 6. ಸಂತೋಷ್, ನಿಮ್ಮ ಅಜ್ಜನವರ ಬಗ್ಗೆ ತಿಳಿದುಕೊಂಡು ತುಂಬಾ ಸಂತೋಷವಾಯಿತು. ಅವರು ಡಿ.ವಿ.ಜಿ.ಯವರ ಆಪ್ತರಾಗಿದ್ದರೆಂದು ಕೇಳಿ ಅವರ ಬಗ್ಗೆ ಹೆಮ್ಮೆ, ಗೌರವ ಮೂಡಿತು. ನಿಮ್ಮದು ತುಂಬು ಸಂಸಾರವೆಂಬುದು ಒಳ್ಳೆಯ ವಿಷಯ.. ಅಂತೆಯೇ ನಮ್ಮದೂ ಕೂಡ. ನಿಮ್ಮ ಅಜ್ಜನವರೂ ಇಂದು ಮೇಲೆಲ್ಲೋ ಕುಳಿತು ನಿಮ್ಮ ಬ್ಲಾಗನ್ನು ಓದಿ ಅವರಿಗೂ ಆನಂದ ಬಾಷ್ಪ ಬಂದಿರಬಹುದು!

  ReplyDelete
 7. Pradeep Sir,

  Nimma maatu nija. nimmadu kooda tumbu samsaara endu keli nanagu kushiyaayitu.

  ReplyDelete
 8. nimma ajjana bagge odi tumba khushi aytu..aa hiriya chethanada aasheervada nammanta makkala mele yavattu irbeku...nangantu nannjjana nodida nenpilla. Na tumba miss madtene..nan tatha kuda olleya kannada panditaru...nimma ajjana vishaya odbekidre avaradde nenpaytu...thank you santhosh...

  ReplyDelete
 9. Appu,

  Thank you for the comment.

  ReplyDelete