04 February 2010

ವಾರ್ಸ: ಒಂದು ಒಳನೋಟ


ವಾರ್ಸ ಎಂದೊಡನೆ ನಮ್ಮ ಕಣ್ಮುಂದೆ ಬರುವ ಚಿತ್ರಗಳು ಎರಡು: ಒಂದು ಪೋಲಂಡ್ ದೇಶದ ರಾಜಧಾನಿ, ಮತ್ತೊಂದು ದ್ವಿತೀಯ ಮಹಾಯುದ್ಧದಲ್ಲಿ ಜೆರ್ಮನಿಯ ಅಟ್ಟಹಾಸಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿದ್ದು.  ಅಂದು ವಾರ್ಸ ಶೇ ೯೦% ನಾಶವಾಗಿ ಅಲ್ಲಿನ ಜನರನ್ನು ನಿರ್ಗತಿಕರನ್ನಾಗಿ ಮಾಡಿತ್ತು. ಅದರ ಕರಿ ನೆರಳು ಇಂದಿಗೂ ಜೀವಂತವಾಗಿ ಎದ್ದು ಕಾಣುತ್ತದೆ. ಕಳೆದ ತಿಂಗಳು ಜನವರಿಯಲ್ಲಿ ವಾರ್ಸಗೆ ಒಂದು ಕೆಲಸದ ನಿಮ್ಮಿತ್ತ ಭೇಟಿ ನೀಡಿದ್ದೆ. ಅಲ್ಲಿ ನಾನು ಕಂಡ ವಿಶೇಷತೆಗಳನ್ನು ಈ ಬರಹದ ಮುಖಾಂತರ ಚಿತ್ರಿಸುತ್ತಿದ್ದೇನೆ. ವಾರ್ಸ ನಗರ ಸುಂದರವಾಗಿದೆ, ಎಲ್ಲಿ ನೋಡಿದರು ಹೊಚ್ಹ ಹೊಸ ಕಟ್ಟಡಗಳು. ಆ ಕಟ್ಟಡಗಳು ಕೇವಲ ೧೦-೧೫ ದಿನಗಳ ಕೆಳಗೆ ನಿರ್ಮಾಣ ಪೂರ್ಣಗೊಳಿಸಿದಂತಿವೆ. ಇದರ ನಡುವೆ ಅಲ್ಲಲ್ಲಿ ಬಾಡಿದ ಹೂವಿನಂತೆ ಇರುವ ಕೆಲವು ತೀರಾ ಹಳೆಯ ಕಟ್ಟಡಗಳು. ಈ ಬಾರಿ ಕಳೆದ ಒಂದು ದಶಕದಿಂದ ಆಗದಂತ ಭರ್ಜರಿ ಹಿಮಪಾತವಾಗುತ್ತಿದೆ. ಆ ನಗರವನ್ನು ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ: ಹೊಸ ನಗರ, ಮತ್ತು ಹಳೆಯ ನಗರ (old town).  ಹಳೆಯ ನಗರವನ್ನು ಸಂಜೆಯಾಗುತ್ತಿದ್ದಂತೆ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತದೆ.  ಆ ಸುಂದರ ದೃಶ್ಯವು ಮನಮೋಹಕವಾಗಿರುತ್ತದೆ. ಅಲ್ಲಿನ ಸಾರಿಗೆ ವ್ಯವಸ್ತೆಯು ಬಲು ಸುಸ್ಸಜ್ಜಿತ. ಪ್ರತಿ ನಿಮಿಷಕ್ಕೊಂದು ಬಸ್ಸು, ಟ್ರಾಮುಗಳು ಬರುತಿರುತ್ತವೆ.  ಅಲ್ಲಿನ ಬಸ್ಸುಗಳಲ್ಲಿಯು ಭಾರತದಲ್ಲಿ ಇರುವಂತೆ ಮುಂದಿನ ನಾಲ್ಕೈದು ಆಸನಗಳು ಮೀಸಲು. ಅಲ್ಲಿ ಯಾರನ್ನಾದರೂ ಭೇಟಿಯಾದರೆ ಅವರು ನುಡಿಯುವ ಮೊದಲ ಮತ್ತು ಬಲು ಪ್ರಚಲಿತ ಮಾತು ಹೇಡೊಬ್ರಾ (Good day) ಎಂದು. ಹಳೆಯ ನಗರದಲ್ಲಿ ಮತ್ತು ಹೊಸನಗರದ ಕೆಲವು ಭಾಗಗಳಲ್ಲಿ ಕಾಫಿ ಹೆವನ್ (coffee heaven) ಎಂಬ ಒಂದು ಹೋಟೆಲ್ ಇದೆ (ನಮ್ಮ coffee day ತರ). ಅಲ್ಲಿ ಬಗೆಬಗೆಯ ರುಚಿ, ಸ್ವಾದವುಳ್ಳ ಕಾಫಿ ಬೇರೆ ಬೇರೆ ಗಾತ್ರಗಳಲ್ಲಿ ಸಿಗುತ್ತದೆ. ಅದರಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವುದು ಜಿನ್ಜೆರ್ ಬ್ರೆಡ್ ಕೋಫಿ (Ginger bread coffee). ಅದರ ರುಚಿ ಅದ್ಭುತ, ಅದನ್ನು ಕುಡಿದರೆ ದೇಹವೆಲ್ಲ ಒಂದು ರೀತಿ ರೋಮಾಂಚನಗೊಳ್ಳುತ್ತದೆ. ಅದರ ಬೆಲೆ ೧೩.೫ ಜ್ವತೆ (Zeote). ಅಲ್ಲಿನ ಜನರಿಗೆ ಕೆಲಸದಿಂದ ಬರುವ ಆದಾಯ ತೀರಾ ಕಡಿಮೆ.  ಅವರು ಬಡತನದ ಬೇಗೆಯಲ್ಲಿ ಬೇಯುತ್ತಿರುವುದು ದಟ್ಟವಾಗಿ ಗೋಚರಿಸುತ್ತದೆ. ಅಲ್ಲಿ ಸಂಶೋಧನೆಗೆ ಪ್ರೋತ್ಸಾಹ ತೀರಾ ಕಡಿಮೆ. ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲು ನಮ್ಮ CSIR-UGC-NET ಪರೀಕ್ಷೆಗಿಂತಲೂ ಕಠಿಣವಾದ ಪರೀಕ್ಷೆ ಎದುರಿಸಬೇಕು. ಅದನ್ನು ಬರೆದು ಆಯ್ಕೆಯಾದರೆ ಸಿಗುವ ಶಿಷ್ಯವೇತನವು ಕಡಿಮೆ. ಜೀವನ ನಡೆಸಲು ವಿದ್ಯಾರ್ಥಿಗಳು ಸಂಜೆವೇಳೆ ಅಥವ ವಾರಾಂತ್ಯದಲ್ಲಿ ಬೇರೆಡೆ ಕೆಲಸ ಮಾಡುತ್ತಾರೆ.  ವಾರ್ಸದಲ್ಲಿ ಬಹು ಪ್ರಸಿದ್ದವಾದ ವೀಕ್ಷಣೀಯ ಸ್ಥಳ Palace of Culture. ಅದರ ಒಂದು ಚಿತ್ರವನ್ನು ಮೇಲೆ ಕಾಣಬಹುದು. ಹೀಗೆ ಸುಖ ದು:ಖಗಳ ನಡುವೆ ನಿದಾನವಾಗಿ ಚೇತರಿಸಿಕೊಳ್ಳುತ್ತಿರುವ ನಗರ ಅದು.      

2 comments: