16 January 2010

ನಂಬಿಕೆ ಮೂಢವೋ ಅಥವಾ ನಂಬುವವರು ಮೂಢರೋ?

ನಂಬಿಕೆ, ಅಪನಂಬಿಕೆ, ಅಥವ ಮೂಢ ನಂಬಿಕೆಗಳು ಹಲವಾರು ಬಾರಿ ಚರ್ಚೆಗೆ ಆಸ್ಪದ ಕೊಟ್ಟಂತ ವಿಷಯ.  ಇವುಗಳ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯವು ಬೇರೆ ಬೇರೆ ಆಗಿರುತ್ತದೆ.  ಈ ಒಂದು ವಿಚಾರವನ್ನು ಹಲವು ಉದಾಹರಣೆಗಳ ಮೂಲಕ, ಹಲವು ಕೋನಗಳಿಂದ ನೋಡಿದಾಗ ಅದರ ನಿಜವಾದ ಅರಿವು ನಮಗೆ ದೊರಕುತ್ತದೆ ಎಂದು ನನ್ನ ಭಾವನೆ.  ನಂಬಿಕೆ ಎನ್ನುವುದು ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿ ಅಥವ ವಿಷಯದಮೇಲೆ ಇರುವ ಒಲವು.  ಆ ಒಲವು ಅವನನ್ನು ಅದರ ಕಡೆಗೆ ಆಕರ್ಷಿಸಿ ಅದರಲ್ಲಿ ದೃಢವಾದ ನಂಬಿಕೆಯನ್ನು ಉಂಟುಮಾಡುತ್ತದೆ.  ಅವನ ನಂಬಿಕೆಯ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದೋ ಅಥವ ಎಲ್ಲದೆಯೋ ಅವನು ಅದನ್ನು ನಂಬಬಹುದು.  ಇನ್ನೊಂದು ರೀತಿಯಲ್ಲಿ ಬೇರೆ ಯಾರೋ ಮಹನೀಯರು ಅದನ್ನು ನಂಬುತ್ತಾರೆ ಎಂದು ಇವರು ನಂಬುವ ಸಾಧ್ಯತೆಯು ಉಂಟು.  ಮೂಢನಂಬಿಕೆಯ ವಿಚಾರಕ್ಕೆ ಬಂದರೆ, ಒಬ್ಬ ವ್ಯಕ್ತಿಗೆ ಒಂದು ವಿಷಯದಲ್ಲಿ ಆಸಕ್ತಿ ಇಲ್ಲದೆಯಿದ್ದಾಗ ಇನ್ನೊಬ್ಬ ವ್ಯಕ್ತಿ ಆಚರಿಸುವ ಆಚರಣೆಯ ಬಗ್ಗೆ ಗೌರವ ಇಲ್ಲದಿದ್ದಾಗ ಅದು ಅವನಿಗೆ ಮೂಢನಂಬಿಕೆ ಎಂದು ಅನಿಸಬಹುದು.  ನನ್ನ ವಿಷಯ, ಆಚರಣೆಗಳು ನಿಮ್ಮಲ್ಲಿ ಆಸಕ್ತಿ ತರದಿದ್ದಾಗ ಅದು ನಿಮಗೆ ಮೂಢನಂಬಿಕೆ ಎಂದು ಅನಿಸಬಹುದು.  ಅದೇ ರೀತಿ ನಿಮ್ಮ ನಂಬಿಕೆಯ ವಿಷಯದಲ್ಲಿ, ಆಚರಣೆಯಲ್ಲಿ ನನಗೆ ಆಸಕ್ತಿ ಬರದಿದ್ದಾಗ ಅದು ನನಗೆ ಮೂಢನಂಬಿಕೆ ಎಂದು ಅನಿಸಬಹುದು.  ಇದರಲ್ಲಿ ಅವರು ಸರಿ, ನನ್ನದು ತಪ್ಪು, ನಾನು ಸರಿ ಅವರು ತಪ್ಪು ಎಂದು ಚರ್ಚೆ ಮಾಡುವುದು ಅನಾವಶ್ಯಕ.  ಈ ವಿಚಾರದ ಬಗ್ಗೆ ಎರಡು ಗುಂಪಿನವರು ಹಲವು ಬಾರಿ ವಾದ ವಿವಾದಗಳನ್ನು ನಡೆಸಿದರೂ ಅದು ಮುಗಿಯದ ಸಂಗತಿ. 

     ಪ್ರಪಂಚದಲ್ಲೆಲ್ಲಾ ಅತಿ ಹೆಚ್ಚು ಚರ್ಚಾಸ್ಪದ ವಿಷಯ ಮತ್ತು ಅನೇಕ ಗಲಬೆಗಳಿಗೆ ಕಾರಣವಾಗಿರುವ ವಿಷಯವೆಂದರೆ ಧರ್ಮ, ಜಾತಿ ಮತ್ತು ಸಂಸ್ಕೃತಿ.  ಒಬ್ಬ ವ್ಯಕ್ತಿ ತಾನು ಅನುಸರಿಸುವ ಧರ್ಮ, ಜಾತಿ, ಆಚರಣೆ, ಸಂಸ್ಕೃತಿಗಳು ಕೇವಲ ಅವನಿಗೆ ಸೀಮಿತ.  ಅದನ್ನು ತನ್ನಂತೆ ಬೇರೆಯವರು ಪಾಲಿಸಬೇಕೆಂದು ಬಯಸುವುದು ತಪ್ಪಾಗುತ್ತದೆ.  ಪ್ರತಿಯೊಬ್ಬರಿಗೂ ಅವರದೇ ಆದ ನಿಯಮಾನುಸಾರಗಳು ಇರುತ್ತದೆ ಮತ್ತು ಅವರು ಅದರಮೇಲೆ ಹೆಚ್ಚು ಭರವಸೆ ಇಟ್ಟು ಅದನ್ನು ನಂಬಿ ಪಾಲಿಸುತ್ತಾರೆ.  ಬೇರೊಬ್ಬರ ಆಚರಣೆಗಳು ತನಗೆ ಇಷ್ಟವಾಗಲಿಲ್ಲ ಎಂದು ಅವರನ್ನಾಗಲಿ, ಆವರ ಧರ್ಮ, ಜಾತಿ ಮತ್ತು ಸಂಸ್ಕೃತಿಗಳನ್ನು ಸರಿಯಿಲ್ಲವೆಂದು ದೂಷಿಸುವುದು ತಪ್ಪು.  ನಿಮಗೆ ಇಷ್ಟವಿಲ್ಲದ ಆಚರಣೆಯನ್ನು ಪಾಲಿಸಲು ಯಾರೂ ನಿಮಗೆ ಬಲವಂತ ಮಾಡುವುದಿಲ್ಲ.  ಒಂದುವೇಳೆ ಒಬ್ಬ ವ್ಯಕ್ತಿ ತಾನು ಆಚರಿಸುತ್ತಿದ್ದ, ಅನುಸರಿಸುತ್ತಿದ್ದ ಧರ್ಮ, ಸಂಸ್ಕೃತಿಯನ್ನು ಬಿಟ್ಟು ಬೇರೆ ಧರ್ಮ,ಸಂಸ್ಕೃತಿಯಕಡೆ  ಒಲವು ತೋರಿದರೆ, ಅವನಿಗೆ ಹಿಂದೆ ತಾನು ಅನುಸರಿಸುತ್ತಿದ್ದ ಧರ್ಮದ ಬಗ್ಗೆ  ಆಸಕ್ತಿ ಈಗ ಇಲ್ಲವೆಂದು ತಿಳಿಯುವುದು ತಪ್ಪು.  ಅವನಿಗೆ ಬೇರೊಂದು ಧರ್ಮದ ಬಗ್ಗೆಯೂ ಒಲವು ಮೂಡಿ ಅದರಲ್ಲಿ ಯಾವುದೋ ಒಂದು ವಿಚಾರ ಅವನಿಗೆ ಹೆಚ್ಚು ಇಷ್ಟವಾಗಿರಬಹುದು (ಇದು ಒಂದು ರೀತಿ ನಾವು ಊಟ ಮಾಡುವಾಗ ತಟ್ಟೆಯಲ್ಲಿ ಇರುವ ಹಲವು ಪದಾರ್ತಗಳ ಪೈಕಿ ನಮಗೆ ಪ್ರಿಯವಾದ ಒಂದನ್ನು ಹೆಚ್ಚು ತಿನ್ನಲು ಬಯಸುತ್ತೇವೆ, ಅದನ್ನು ಇನ್ನೊಮ್ಮೆ ಕೇಳಿ ಪಡೆದು ಅದರ ರುಚಿಯನ್ನು ಸವೆಯುತ್ತೇವೆ).  ಭಗವದ್ಗೀತೆ, ಕುರಾನ್, ಬೈಬಲ್, ಹೀಗೆ ಅನೇಕ ಧರ್ಮಗಳ ಗ್ರಂಥಗಳನ್ನು ಒಮ್ಮೆ ಕುತೂಹಲ, ಆಸಕ್ತಿಗಳಿಂದ ಓದಿದಾಗ ಎಲ್ಲರಿಗೂ ತಿಳಿಯುವ ವಿಷಯವೆಂದರೆ, ಇದಾವುದರಲ್ಲೂ ಆ ಧರ್ಮವನ್ನೇ ಪಾಲಿಸಬೇಕು, ಅದುವೇ ಶ್ರೇಷ್ಠ ಎಂದು ಎಲ್ಲೂ ಹೇಳಿಲ್ಲ.  ಈ ಅನುಸರಣೆಗಳೆಲ್ಲ ನಮ್ಮ ನಂಬಿಕೆಯ ಮೇಲೆ ಅವಲಂಬಿತವಾದದ್ದು.  ಇವು ಕೇವಲ ನಮಗೆ ನಾವೇ ಹಾಕಿಕೊಂಡಿರುವ ಕಟ್ಟುಪಾಡುಗಳು ಮತ್ತು ನಿಯಮಗಳು.  ಧರ್ಮದಲ್ಲಿಯೂ ಅನೇಕ ಒಳಪಂಗಡಗಳನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ.  ನಮ್ಮ ಸಮಾಜದಲ್ಲಿ ಮುಖ್ಯವಾಗಿ ಇರುವ ಪಂಗಡಗಳ ಉದಾಹರಣೆಯನ್ನೇ ಗಮನಿಸಿದರೆ ಅದರಲ್ಲಿ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮತ್ತು ಶೂದ್ರ.  ಇದು ಅವರವರ ಕೆಲಸ ಕಾರ್ಯಕ್ಕೆ ಅನುಗುಣವಾಗಿ ಹಿಂದೆ ನಮ್ಮ ಪೂರ್ವಿಕರು ವಿಭಜಿಸಿದ್ದರು.  ಆದರೆ ಅದರ ಅನುಗುಣವಾಗಿಯೇ ಇಂದು ಜನರು ಕೆಲಸ ನಿರ್ವಹಿಸುತ್ತಿಲ್ಲ.  ಇದರ ವಿಷಯವಾಗಿ ವಿವೇಕಾನಂದರು ಹೇಳಿರುವ ಒಂದು ಮಾತನ್ನು ಎಲ್ಲರೂ ಗಮನಿಸಬೇಕು.  ಒಂದೇ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಮೇಲಿನ ನಾಲ್ಕೂ ಪಂಗಡಗಳಲ್ಲಿಯೂ ಕೆಲಸ ನಿರ್ವಹಿಸುತ್ತಾನೆ.  ಯಾವ ವ್ಯಕ್ತಿ ದೇವರ ಪೂಜೆ, ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೋ ಆಗ ಅವನು ಬ್ರಾಹ್ಮಣನಾಗಿರುತ್ತಾನೆ, ಯಾವ ವ್ಯಕ್ತಿ ಅಂಗಡಿಯಲ್ಲಿ ತನಗೆ ಬೇಕಾದ ವಸ್ತುವನ್ನು ಖರೀದಿಸಲು ವ್ಯಾಪಾರ ಮಾಡುತ್ತಾನೋ ಆಗ ಅವನು ವೈಶ್ಯನಾಗಿರುತ್ತಾನೆ, ಯಾವ ವ್ಯಕ್ತಿ ತನ್ನ ಬಂಧುಗಳ, ಸ್ನೇಹಿತರ, ಸಮಾಜದ ಕಾರ್ಯಕ್ಕಾಗಿ ಹೊರಾಡುತ್ತಾನೋ ಆಗ ಅವನು ಕ್ಷತ್ರಿಯನಾಗಿರುತ್ತಾನೆ, ಯಾವ ವ್ಯಕ್ತಿ ಹಿರಿಯರ, ಅಂಗವಿಕಲರ, ವೃದ್ಧರ ಸೇವೆ ಮಾಡುತ್ತಾನೋ ಆಗ ಅವನು ಶೂದ್ರನಾಗಿರುತ್ತಾನೆ.  ಇದೇ ರೀತಿಯ ವಿಚಾರವನ್ನು ದೇವರ ನಂಬಿಕೆ ವಿಷಯದಲ್ಲೂ ಮಂಡಿಸಬಹುದು.  ಈ ಸಂದರ್ಭದಲ್ಲಿ ಒಂದು ಚಿಕ್ಕ ಉದಾಹರಣೆಯನ್ನು ಕೊಡಲು ಬಯಸುತ್ತೇನೆ.  ನನ್ನೊಡನೆ ಸಂಶೋಧನೆ ನಡೆಸುತ್ತಿರುವ ಒಬ್ಬ ಗೆಳತಿಯು ಹಿಂದೂ ಧರ್ಮದ ಅನುಯಾಯಿ ಆದರೂ ಆಕೆ ದೇವರನ್ನು ನೆನೆಯುವಾಗ ಮೊದಲಿಗೆ ಆಕೆಯಿಂದ ಬರುವ ಹೆಸರು Jesus ಎಂದು.  ಹಾಗಂತ ಆಕೆ ತಾನು ನಂಬುವ ಧರ್ಮದ ಕಟ್ಟುಪಾಡುಗಳನ್ನು ಮೀರುತ್ತಿದ್ದಾಳೆ ಎಂದು ಅಲ್ಲ.  ಅವಳಿಗೆ Jesus ಮೇಲೆ ಹೆಚ್ಚು ನಂಬಿಕೆ, ಭಕ್ತಿ ಇರಬಹುದು.  ಬೇಡುವ ಮನಸ್ಸು ಭಕ್ತಿಯಿಂದ ವಂದಿಸಬೇಕೆ ಹೊರತು ದೇವರ ಹೆಸರು ಮುಖ್ಯವಾಗುವುದಿಲ್ಲ (ದೇವನೊಬ್ಬ ನಾಮ ಹಲವು ಎಂದು ನಾವೆಲ್ಲಾ ಓದಿದ್ದೇವೆ, ಕೇಳಿದ್ದೇವೆ).  ಇನ್ನು ದೇವರಹೆಸರಲ್ಲಿ ಕುರಿ, ಕೋಳಿಗಳನ್ನು ಬಲಿ ಕೊಡುವುದು ಎಲ್ಲರಿಗೂ ತಿಳಿದಿರುವ ವಿಚಾರ.  ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಬಲಿಯೂ ಕೇವಲ ಸಾಕು ಪ್ರಾಣಿಗಳಿಗೆ ಸೀಮಿತವೇ? ಯಾಕೆ ಹುಲಿ, ಸಿಂಹ, ಚಿರತೆಗಳನ್ನು ಬಲಿ ಕೊಡುವುದಿಲ್ಲ?  ಸಾಕು ಪ್ರಾಣಿಗಳಾದರೆ  ನಮಗೆ ಏನೂ ಮಾಡುವುದಿಲ್ಲ ಎನ್ನುವ ನಂಬಿಕೆ ನಮಗೆ.  ಅದೇ ಕಾಡು ಪ್ರಾಣಿಗಳನ್ನು ಬಲಿ ಕೊಡಲು ಹೋದರೆ ಅದರ ಬಾಯಿಗೆ ನಾವೇ ಬಲಿಯಾಗಬಹುದೆಂಬ ಭಯ.  ಈ ರೀತಿ ಕುರಿ, ಕೋಳಿಯನ್ನು ಬಲಿ ಕೊಟ್ಟರೆ ಮಳೆಯಾಗುವುದು ಎಂದು ಬರಗಾಲದಲ್ಲಿ ಕೆಲವರ ನಂಬಿಕೆ.  ಆದರೆ ಮಳೆ ಬರಲು ಭೂಮಿಯಲ್ಲಿನ ನೀರು ಆವಿಯಾಗಬೇಕೆ ಹೊರತು ಹರಿಸಿದ ರಕ್ತ ಆವಿಯಾಗದು ಎಂಬ ಸತ್ಯ ಅವರು ತಿಳಿಯುವುದು ಒಳ್ಳೆಯದು.  ಇಂತಹ ವಿಷಯಗಳಲ್ಲಿ ನಂಬಿಕೆ ಇಡುವವರು ಮೂಢರೆನಿಸಿಕೊಳ್ಳಬಹುದು.  ನದಿಯು ಎಲ್ಲೇ ಹುಟ್ಟಲಿ, ಎಲ್ಲೇ ಹರಿಯಲಿ, ಅದು ಕೊನೆಗೆ ಸೇರುವುದು ಸಮುದ್ರವನ್ನೇ.  ಹಾಗಾಗಿ ನಂಬಿಕೆ ಮೂಢವಾದಲ್ಲಿ ನಂಬುವವರು ಮೂಢರಾಗುವ ಸಾಧ್ಯತೆ ಇರುತ್ತದೆ,  ಆ ನಂಬಿಕೆಯು ಅಛಲವಾದರೆ ಅಲ್ಲಿ ಮೂಢ ಎನ್ನುವುದು ಇರುವುದಿಲ್ಲ.  ಕೊನೆಯದಾಗಿ, ನಂಬಿಕೆಯು ಕೇವಲ ನೋಡುಗರ ದೃಷ್ಟಿಕೋನದ ಮೇಲೆ ಅವಲಂಬಿತವಾಗಿರುತ್ತದೆ.  

3 comments: