ವನಸಿರಿಯ ನಡುವೆ, ಹರಿಣಿಗಳ ಮಧ್ಯದಲ್ಲಿ, ಹಕ್ಕಿಗಳ ಚಿಲಿಪಿಲಿ ಗಾನಕ್ಕೆ ತಲೆದೂಗುತ್ತಾ ಹಚ್ಚ ಹಸಿರಿನ ಹುಲ್ಲುಗಾವಲಿನಮೇಲೆ ನಡೆದಾಡುತ್ತಾ, ಇಬ್ಬನಿಯ ಮನಮೋಹಕ ದೃಶ್ಯವನ್ನು ಸವೆಯುತ್ತಾ ಎರಡು ದಿನ ನಮಗರಿವಿಲ್ಲದಂತೆ ಜಾರಿಹೋದ ಕ್ಷಣಗಳ ಅನುಭವ ದೊರೆತದ್ದು ಚಾಮರಾಜನಗರ ಜೆಲ್ಲೆಯ ಬಂಡೀಪುರ ಅರಣ್ಯದಲ್ಲಿ.
ಮೊನ್ನೆ ಬುಧವಾರ ಮುಂಜಾನೆ ೬.೫೫ಕ್ಕೆ, ಬೆಂಗಳೂರಿನ ಸೆಟಿಲೈಟ್ ಬಸ್ ನಿಲ್ದಾಣದಿಂದ ಊಟಿಗೆ ಹೋಗುವ ಐರಾವತ ಬಸ್ಸನ್ನೇರಿ ನಾನು ನನ್ನ ಸ್ನೆಹಿತ ವೆಂಕಟೇಶ್ ಬಂಡೀಪುರದತ್ತ ಪ್ರಯಾಣ ಹೊರಟೆವು. ಸುಮಾರು ೧೧.೨೦ಕ್ಕೆ ಬಂಡೀಪುರ ತಲುಪಿ ಅಲ್ಲಿದ್ದ ಸ್ವಾಗತ ಕಛೇರಿಗೆ ಹೋಗಿ ಒಂದು ದಿನದ ವಾಸಕ್ಕೆ ಕೊಠಡಿಯನ್ನು ಬಾಡಿಗೆ ಕೇಳಿದೆವು. ಅಲ್ಲಿದ್ದ ಅರಣ್ಯಾಧಿಕಾರಿ ನಮ್ಮ ಅವಶ್ಯಕತೆಗಳನ್ನು ವಿಚಾರಿಸಿ, ಅದಕ್ಕೆ ತಕ್ಕ೦ತೆ ಕರ್ನಾಟಕ ಸರ್ಕಾರ ನಿರ್ವಹಿಸುತ್ತಿರುವ ಕೊಠಡಿಗಳಲ್ಲಿ ಒಂದಾದ ವನಶ್ರೀ ಕೊಠಡಿಯನ್ನು ನೀಡಿದರು. ವಿಶಾಲವಾದ ಕೊಠಡಿ ಮತ್ತು ಅದಕ್ಕೆ ಸೇರಿದ ಸ್ನಾನದ ಕೋಣೆಯನ್ನು ಶುಬ್ರವಾಗಿರಿಸಿದ್ದರು. ಅಲ್ಲೇ ಪಕ್ಕದಲ್ಲಿದ್ದ ಅಡುಗೆ ಮನೆಗೆ (ಮೆಸ್ಸ್) ಹೋಗಿ ನಮ್ಮಿಬ್ಬರಿಗೆ ಮಧ್ಯಾನದ ಊಟಕ್ಕೆ ಹೆಸರು ಬರೆಸಿ ಬಂದೆವು. ಊಟಕ್ಕೆ ಇನ್ನೂ ಒಂದು ಘಂಟೆ ಸಮಯವಿದ್ದುದರಿಂದ ಅಲ್ಲಿದ್ದ ಜಿಂಕೆಗಳನ್ನು ನೋಡಿ, ಅದರ ಛಾಯಾಚಿತ್ರಗಳನ್ನು ತೆಗೆಯಲು ಹೋದೆವು. ಬಲು ಅಂಜಿಕೆಯ, ಭಯ ಸ್ವಭಾವದ ಜಿಂಕೆಗಳು ನಾವು ಹತ್ತಿರ ಸುಳಿಯುತ್ತಿದ್ದಂತೆ ದೂರ ಓಡುತ್ತಿದ್ದವು. ಆ ಗುಂಪಿನಲ್ಲಿದ್ದ ಮರಿ ಜಿಂಕೆಗಳ ತುಂಟಾಟವನ್ನು ನೋಡುತ್ತಾ ಸಂಬಂಧಗಳ ನಡುವಿನ ಆತ್ಮೀಯತೆಯನ್ನು ಮೆಲುಕುಹಾಕಿದೆವು. ಹಾಗೆಯೇ ಅಲ್ಲಿ ಸುತ್ತಾಡುತ್ತಾ ಅಲ್ಲಿದ್ದ ಪ್ರಾಣಿ ಸಂಗ್ರಹಾಲಯಕ್ಕೆ ಹೋದೆವು. ಅಲ್ಲಿ ಪ್ರಾಣಿ-ಪಕ್ಷಿಗಳ ಬಗ್ಗೆ ವಿವರಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅದರ ಜೊತೆಗೆ ಆ ಪ್ರದೇಶದ ಸುತ್ತಮುತ್ತಲಿನ ವಿವರವನ್ನು ದಾಖಲಿಸಿದ್ದಾರೆ. ಊಟ ಮುಗಿಸಿದ ನಂತರ ಅಲ್ಲಿಂದ ೧೩ ಕಿ.ಮೀ. ದೂರದಲ್ಲಿರುವ ಕರ್ನಾಟಕ - ತಮಿಳುನಾಡು ಗಡಿಯಲ್ಲಿರುವ ಮುದುಮಲೈ ಹುಲಿ ಅಭಯಾರಣ್ಯಕ್ಕೆ ಹೋಗಲು ಬಸ್ಸ್ ಗಾಗಿ ಕಾದು ನಿಂತೆವು. ಆದರೆ ಬಂದ ಬಸ್ಸ್ ನ ಕಂಡಕ್ಟರ್ ಮುದುಮಲೈ ನಲ್ಲಿ ನಿಲ್ಲಿಸುವುದಿಲ್ಲಾ ಎಂದು ಹೇಳಿ ಹೊರಟುಹೋಗುತ್ತಿದ್ದರು. ಸುಮಾರು ೩೦ ನಿಮಿಷ ಕಾದ ನಂತರ ಅಲ್ಲಿದ್ದ ಹೊರ ಠಾಣೆಯ ಪೊಲೀಸ್ ನಮ್ಮ ಸಹಾಯಕ್ಕೆ ಬಂದರು. ಆ ದಾರಿಯಲ್ಲಿ ಹೋಗುತ್ತಿದ್ದ ಜೀಪ್ ಒಂದನ್ನು ನಿಲ್ಲಿಸಿ ನಮ್ಮನ್ನು ಮುದುಮಲೈಗೆ ತಲುಪಿಸುವಂತೆ ಸೂಚಿಸಿದರು. ಈ ಹೊತ್ತಿಗೆ ಒಂದೆರೆಡು ನಿಮಿಷಗಳ ಕಾಲ ಧಾರಾಕಾರ ಮಳೆ ಸುರಿಯಿತು. ಆ ನಡೆದ ಒಂದು ಸಂಗತಿ ಕಣ್ಣಿಗೆ ಕಟ್ಟಿದಂತಿದೆ. ಪೊಲೀಸ್ ಠಾಣೆಯ ಮುಂದೆ ಮರದ ಕೆಳಗೆ ಒಂದು ಕೋತಿಯು ತನ್ನ ಮರಿಯನ್ನು ಗಟ್ಟಿಯಾಗಿ ಅಪ್ಪಿ ಮಳೆಯಿಂದ ರಕ್ಷಿಸಲು ಪಡುತ್ತಿದ್ದ ಪಾಡು ಕಣ್ಣಲ್ಲಿ ನೀರುತರಿಸುವಂತೆ ಪ್ರೀತಿ, ಮಮತೆ, ವಾತ್ಸಲ್ಯಗಳ ಪ್ರತೀಕವಾಗಿತ್ತು. ಮುದುಮಲೈಗೆ ಹೋಗಲು ಕಾಡಿನ ನಡುವೆಯೇ ಹೋಗಬೇಕಾಗಿರುವುದರಿಂದ, ಆ ಸುಂದರ ವಿಹಂಗಮ ನೋಟವನ್ನು ಸವಿಯುತ್ತಾ ಇಪತ್ತು ನಿಮಿಷಗಳಲ್ಲಿ ತಲುಪಿದೆವು. ಅಲ್ಲಿ ೧೫೦ ರೂ. ಕೊಟ್ಟು ಸಫಾರಿಗೆ ಹೋಗಲು ವ್ಯಾನ್ ಹತ್ತಿ ಕುಳಿತೆವು. ೪೫ ನಿಮಿಷಗಳ ಕಾಲ ಕಾಡಿನ ನಡುವೆ ಸಂಚರಿಸಿದರೂ ನಮಗೆ ಕಂಡದ್ದು ಜಿಂಕೆ, ನವಿಲು, ಕಾಡೆಮ್ಮೆ, ಆನೆಗಳು ಮಾತ್ರ. ಹುಲಿ, ಚಿರತೆ ಅಥವ ಬೇರಾವ ಪ್ರಾಣಿಗಳು ಅಲ್ಲಿ ಕಾಣಾಲಿಲ್ಲ. ಅವುಗಳನ್ನು ಕಾಣಲು ಅದೃಷ್ಟವಿರಬೇಕು. ಈ ಕಾರಣಕ್ಕಾಗಿಯೇ ಅಲ್ಲಿ ಸೂಚನಾ ಫಲಕಗಳನ್ನು "ಪ್ರಾಣಿಗಳನ್ನು ಕಾಣುವುದು ಅದೃಷ್ಟಾದಾರಿತ, ಅದರಮೇಲೆ ನಮ್ಮ ಹಿಡಿತವಿರುವುದಿಲ್ಲ" ಎಂದು ಹಾಕಿರುತ್ತಾರೆ. ನಂತರ ಬಂಡೀಪುರಕ್ಕೆ ಮರಳಿ ಬಸ್ಸ್ ಒಂದನ್ನು ಹಿಡಿದು ಬಂದೆವು. ಆ ಹೊತ್ತಿಗೆ ಮಳೆಯಾಗುತ್ತಿದ್ದರಿಂದ ಅಲ್ಲಿ ಸಂಜೆಯ ಸಫಾರಿಯನ್ನು ರದ್ದುಮಾಡಲಾಗಿತ್ತು. ಆದ್ದರಿಂದ ಅಲ್ಲಿ ಮತ್ತೆ ಜಿಂಕೆಗಳ ಛಾಯಾಚಿತ್ರಗಳನ್ನು ತೆಗೆಯುತ್ತಾ ಕಾಲಾಕಳೆದೆವು. ರಾತ್ರಿ ೭.೩೦ರಿಂದ ೮.೩೦ರ ವರೆಗೆ ಪ್ರಾಣಿಗಳ ವೀಡಿಯೋ ಪ್ರದರ್ಶನವಿರುತ್ತದೆ. ಅದರಲ್ಲಿ ಪ್ರಾಣಿ-ಪಕ್ಷಿಗಳ ಓಡಾಟ, ಅದರ ಗುಣ-ಲಕ್ಷಣಗಳ ಬಗ್ಗೆ ಚಿತ್ರೀಕರಣವಿರುತ್ತದೆ. ೮.೩೦ಕ್ಕೆ ರಾತ್ರಿಯ ರುಚಿಯಾದ ಬಫೆ ಊಟ ಮಾಡಿದೆವು. ರಾತ್ರಿ ಸಂಪೂರ್ಣ ಕತ್ತಲೆ ಇರುವುದರಿಂದ ಹೊರಗೆ ಓಡಾಡಲು ಆಗುವುದಿಲ್ಲ.
ಎರಡನೆ ದಿನ ಮುಂಜಾನೆ ೬.೩೦ ಕ್ಕೆ ಬಂಡೀಪುರದ ಸಫಾರಿಗೆ ಹೋಗಲು ಸಜ್ಜಾಗಿ ನಿಂತೆವು. ಆ ಸಮಯ, ಮೃದುವಾದ ಚಳಿಯಲ್ಲಿ ಮಂಜಿನ ಪರದೆಯನ್ನು ಬೆಧಿಸಿಬರುತ್ತಿದ್ದ ಚೂಪಾದ ಸೂರ್ಯನ ಕಿರಣಗಳು ಅರಣ್ಯ ಸಂಚಾರಕ್ಕೆ ಹೇಳಿಮಾಡಿಸಿದಂತ್ತಿತ್ತು. ಆಗ ತಾನೆ ತಮ್ಮ ನಿದಿರೆಯಿಂದ ಏಳುತ್ತಿದ್ದ ಪ್ರಾಣಿಗಳ ಮುಗ್ದ ನೋಟ ನೋಡುಗರನ್ನು ಹೆಚ್ಚು ಆಕರ್ಷಿಸುತ್ತಿತ್ತು. ಇಲ್ಲಿ ಒಂದೂವರೆ ಘಂಟೆಗಳ ಕಾಲ ಕರೆದೊಯ್ಯುವ ಸಫಾರಿಯೂ ಕೂಡ ಅದೃಷ್ಟಾದಾರಿತ. ಹಸಿರಿನ ಹಾಸಿಗೆಯ ಮೇಲೆ ಬಿದಿರು-ಬೊಂಬುಗಲ ಕಂಬಗಳಿಗೆ ಕಟ್ಟಿದ ತೋರಣದಂತೆ ಹೂ-ಎಲೆಗಲ ಅಲಂಕಾರ ನೋಡಲು ಎರಡು ಕಣ್ಣು ಸಾಲದು. ಮೊದಲೇ ಮನಸ್ಸಿನಲ್ಲಿ ಹುಲಿ, ಚಿರತೆ ಗಳನ್ನು ಕಾಣುವ ತವಕ, ಕುತೂಹಲ ತುಂಬಿದ್ದರಿಂದ ರಸ್ತೆಯಲ್ಲಿ ಮರದ ದಿಮ್ಮಿಗಳು, ಮಣ್ಣಿನ ಚಿಕ್ಕ ಗುಡ್ಡೆಗಳು, ಹುಲಿ, ಚಿರತೆಗಳು ಕುಳಿತಿರುವಂತೆ, ಮಲಗಿರುವಂತೆ ಗೋಚರಿಸುತ್ತದೆ. ಆದರೆ ಅದರ ಹತ್ತಿರ ಹೋದಂತೆ ಅದರ ನಿಜ ಸ್ವರೂಪ ತಿಳಿಯುತ್ತದೆ. ಕಾಡಿನ ಒಳಗೆ ನಮ್ಮನ್ನು ಕರೆದೊಯ್ಯುವ ವಾಹನದ ಚಾಲಕನ ಕಣ್ಣುಗಳು ಬಹಳ ಚುರುಕಾಗಿದವು. ಅವರ ಆ ಚುರುಕುತನದಿಂದಲೇ ನಮಗೆ ನವಿಲು, ಹದ್ದು, ಲಂಗೂರ್ ಗಳನ್ನು ನೋಡುವಂತಾಯಿತು. ಇದರೊಂದಿಗೆ ಹುಲಿ, ಆನೆಗಳ ಹೆಜ್ಜೆಗುರುತುಗಳನ್ನು ಗುರುತಿಸುವಂತಾಯಿತು. ಸಫರಿ ಮುಗಿದಮೇಲೆ ತಿಂಡಿಯನ್ನು ತಿಂದು ಆನೆ ಶಿಬಿರಕ್ಕೆ ಹೋಗಿ ಅವುಗಳ ಕೆಲವು ಛಾಯಾಚಿತ್ರಗಳನ್ನು ತೆಗೆದು ಅಲ್ಲಿದ್ದ ಒಂದು ಮರಿ ಆನೆಯ ತುಂಟುತನವನ್ನು ನೋಡುತ್ತ ಸ್ವಲ್ಪಹೊತ್ತು ಕಳೆದೆವು. ಆ ಪ್ರಾಣಿಗಳು ತಮ್ಮ ಮಕ್ಕಳನ್ನು ಲಾಲಿಸಿ ಪಾಲಿಸುವ ರೀತಿ ನಿಜಕ್ಕೂ ಮೆಚ್ಚುವಂತದ್ದು. ಹೀಗೆ ನೋಡ-ನೋಡುತ್ತಲೇ ಸಮಯ ಕಳೆದುಹೋಯಿತು. ಆ ಸುಂದರ ವಾತಾವರಣವನ್ನು ಬಿಟ್ಟು ಹೋಗುವ ಮನಸಿಲ್ಲದಿದ್ದರೂ ಹೊರಡಲೇಬೇಕಾದ ಸ್ಥಿತಿ ಇದ್ದುದರಿಂದ ಅಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ವಂದಿಸಿ, ಅಲ್ಲಿನ ವನ್ಯಜೀವಿಗಳಿಗೆ ಶುಭಕೋರಿ ನಮ್ಮ ಮನೆಯ ದಾರಿ ಹಿಡಿದು ಹೊರಟೆವು. ಅಂತಹ ಒಂದು ಸುಂದರ ಜಗತ್ತಿನ ಅನುಭವವನ್ನು ಪಡೆದ ನಾವು ಧನ್ಯರಾದೆವು.
Good one!
ReplyDelete