19 December 2011

ಶಿಕ್ಷಕ, ಶಿಕ್ಷಣದ ಬವಣೆ-ಬದಲಾವಣೆ

ಪಿಯುಸಿ ತರಗತಿಯಲ್ಲಿ ಕುಳಿತು ಇಂಗ್ಲಿಷ್ ಪಾಠ ಕೇಳುತಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬ ತನ್ನ ಸ್ನೇಹಿತನಿಗೆ ಹೇಳಿದ "ಏನ್ ಗುರು, ಪುಸ್ತಕದಲ್ಲಿ ಇರುವ ವಿಷಯವನ್ನು ಸುಮ್ಮನೆ ಓದಿಕೊಂಡು ಹೋಗುತ್ತಿದ್ದಾರೆ ಈ ಮೇಷ್ಟ್ರು, ವಿವರಣೆ ಕೊಡೋದೇ ಇಲ್ಲವಲ್ಲ.  ತಕ್ಷಣ ಆ ಸ್ನೇಹಿತ ಕೇಳಿದ, "ನೀನು ಕಾಲೇಜಿನ ಪ್ರಾಸ್ಪೆಕ್ಟಸನ್ನು ಸರಿಯಾಗಿ ನೋಡಿದೀಯಾ?" ಅವನು ಮಾತನ್ನು ಮುಂದುವರಿಸಿ ಹೇಳಿದ, "ಅದರಲ್ಲಿ ಇವರ ಹೆಸರಿನ ಪಕ್ಕದಲ್ಲಿ "ರೀಡರ್ " ಅಂತ ಹಾಕಿದ್ದಾರೆ." 
ಇದು ಕೇವಲ ಒಂದು ಶಾಲೆ ಅಥವಾ ಕಾಲೇಜಿನ ಕಥೆಯಲ್ಲ. ಇಂತಹ ಸನ್ನಿವೇಶಗಳು ಬಹುತೇಕ ಶಾಲಾ-ಕಾಲೇಜುಗಳಲ್ಲಿ ದಿನನಿತ್ಯ ನಡೆಯುತ್ತಿರುವ ಸಂಗತಿ.  ಒಂದೆರಡು ದಶಕಗಳ ಕೆಳಗೆ ಕೂಡ ಶಿಕ್ಷಕ ವೃತ್ತಿ ಒಂದು ಗೌರವಾನ್ವಿತ ಮತ್ತು ಪೂಜನೀಯ ಕೆಲಸವಾಗಿತ್ತು. ಆದರೆ, ಇಂದು ಶಿಕ್ಷಕ ವೃತ್ತಿಗೆ ಬರುವವರ ಸಂಖ್ಯೆ ತೀರಾ ಕಡಿಮೆ; ಒಂದುವೇಳೆ ಬಂದರೂ ಇಷ್ಟಪಟ್ಟು ಬರುವವರಿಗಿಂತ ಕಷ್ಟಪಟ್ಟು ಬರುವವರೇ ಹೆಚ್ಚು. ಇದರಿಂದ, ಅವರು ಹೇಗೋ ಬಂದು, ಒಂದು ತಾಸು ಪಾಠ ಹೇಳಿ ಹೋದರೆ ಮುಗಿಯಿತು ಎಂಬ ಆಲೋಚನೆಯಲ್ಲಿ ಇರುತ್ತಾರೆ.  ಇದರಿಂದಾಗಿ, ವಿದ್ಯಾರ್ಥಿಗಳು ಕಲಿಕೆಯನ್ನು ರಸವತ್ತಾಗಿ ಆನಂದಿಸುವ ಬದಲು, ಯಂತ್ರದಂತೆ ಕೇವಲ ಅಂಕಗಳ ಮೊರೆಹೋಗುತ್ತಿದ್ದಾರೆ.  ನಮ್ಮ ಶಾಲಾ-ಕಾಲೇಜುಗಳಲ್ಲಿ ಬಹುಪಾಲು ಪರೀಕ್ಷೆಯ ದೃಷ್ಟಿಕೋನದಲ್ಲಿ ಪಾಠ ಮಾಡುತ್ತಾರೆಯೇ ಹೊರತು ಜ್ಞಾನದ ಬೆಳವಣಿಗೆಗಲ್ಲ.  ಇಂತಹ ಒಂದು ಪರಿಸರ ಸೃಷ್ಟಿಯಾಗಲು ಶಿಕ್ಷಕರ ನಿರಾಸಕ್ತಿಯೇ ಕಾರಣವೆಂದು ಹೇಳಬಹುದು.  ನಮ್ಮ ಬಹುತೇಕ ಮಂದಿ ಶಿಕ್ಷಕರು ಕೇವಲ ೩-೪ ವರುಷ ಅನುಭವ ಆದರೆ ಸಾಕು, ತರಗತಿಗೆ ಪೂರ್ವಸಿದ್ಧತೆ ಇಲ್ಲದೆಯೇ ಬರುವ ಹಲವು ಉದಾಹರಣೆಗಳಿವೆ.  ಇದರಿಂದ, ಅವರ ಕಲಿಕಾ ಸಾಮರ್ಥ್ಯ ಕುಗ್ಗಿ, ನಿರಾಸಕ್ತಿ ಉಂಟಾಗುತ್ತದೆ.  ಹೊಸ ವಿಚಾರಗಳು, ಉದಾಹರಣೆಗಳು ಮೂಡುವ ಅಥವ ನೀಡುವ ಸಾಧ್ಯತೆ ನಶಿಸಿಹೋಗುತ್ತದೆ.  ಮುಂದೆ ಅವರು ೨೫-೩೦ ವರುಷ ಅದೇ ಪಾಠವನ್ನು, ವಿಚಾರವನ್ನು ಅದೇರೀತಿ ಬೋಧಿಸಿದಾಗ ಅದು ಸ್ವಾರಸ್ಯವಿಲ್ಲದ ಮತ್ತು ಸತ್ವವಿಲ್ಲದ ವಿಚಾರ ವಿನಿಮಯವಾಗುತ್ತದೆ.  ಶಿಕ್ಷಕರು ತಮಗೆ ಎಲ್ಲವೂ ಗೊತ್ತಿದೆ, ಇನ್ನು ತಾವು ಓದುವ ಅವಶ್ಯಕತೆಯೇ ಇಲ್ಲವೆಂಬ ಮುಖವಾಡವನ್ನು ತೊಟ್ಟು ಅಗಾಧ ಜ್ಞಾನ ಸಾಗರದಲ್ಲಿ ಈಜಲು ಪ್ರಯತ್ನಿಸಿ, ತಮಗರಿವಿಲ್ಲದಂತೆ ಮುಳುಗಿ ಹೋಗಿರುತ್ತಾರೆ.  ಇನ್ನು ವಿಜ್ಞಾನದ ವಿಷಯ. ಅನೇಕ ವೈಜ್ಞಾನಿಕ ವಿಚಾರಗಳನ್ನು ಹೆಚ್ಚು ಸೈದ್ಧಾಂತಿಕವಾಗಿ ಬೋಧಿಸಲಾಗುತ್ತಿದೆ; ಅದಕ್ಕೆ ಸೂಕ್ತವಾದ ಪ್ರಯೋಗಗಳನ್ನು ಮಾಡಿತೋರಿಸದ ಕಾರಣ ಅದರಿಂದ ವಿದ್ಯಾರ್ಥಿಗಳು ದೂರವಾಗುತ್ತಿರುವ ಪರಿಸ್ಥಿತಿ ಇಂದು ಒದಗಿದೆ.  ಇದರಿಂದಾಗಿ, ನಮ್ಮಲ್ಲಿ ಕೇವಲ ವಿಜ್ಞಾನದ ವಿದ್ಯಾರ್ಥಿಗಳು ತಯಾರಾಗುತ್ತಿದ್ದಾರೆಯೇ ಹೊರತು ವಿಜ್ಞಾನಿಗಳನ್ನಲ್ಲ.  ಇಂದು ಭಾರತ ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿದೆ ಎನ್ನಬಹುದೇ ವಿನಃ ವಿಜ್ಞಾನದಲ್ಲಲ್ಲ. ಯಾವುದೇ ದೇಶದ ತಂತ್ರಜ್ಞಾನ ಬೆಳೆಯಬೇಕಾದರೆ, ಅದಕ್ಕೆ ವಿಜ್ಞಾನದ ಬೆಂಬಲ ಬಹಳ ಮುಖ್ಯ.  ವಿಜ್ಞಾನ ತಾಯಿಬೇರು, ತಂತ್ರಜ್ಞಾನದ ಅನೇಕ ಮುಖಗಳು ಮರದ ಶಾಖೋಪಶಾಖೆಗಳು. ತಾಯಿಬೇರು ನೀರುಂಡಾಗ ಶಾಖೋಪಶಾಖೆಗಳು ತಾವಾಗಿಯೇ ಸಮೃದ್ಧವಾಗುತ್ತವೆ. ಇದನ್ನರಿತು ಕೇವಲ ತಂತ್ರಜ್ಞಾನವನ್ನಾಲಿಸದೆ ವಿಜ್ಞಾನದ ಬೆಳವಣಿಗೆಗೂ ಒತ್ತು ನೀಡಬೇಕು. 

ಶಿಕ್ಷಕರ ಸಬಲೀಕರಣ
ಇನ್ನೊಂದು ರೀತಿಯಲ್ಲಿ ಯೋಚಿಸಿದಾಗ, ಶಿಕ್ಷಕರಿಗೆ ಪ್ರೋತ್ಸಾಹ ಮತ್ತು ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲವೆಂದು ಅನ್ನಿಸುತ್ತದೆ.  ಇಂದಿನ ಶಾಲಾ-ಕಾಲೇಜುಗಳ ಯಜಮಾನರು ಶಿಕ್ಷಕರಿಗಿಂತ ಹೆಚ್ಚು ಕಟ್ಟಡಕ್ಕೆ ಮತ್ತು ಸೌಲಭ್ಯಗಳಿಗೆ ಒತ್ತು ನೀಡುತ್ತಿರುವುದು ಗೋಚರಿಸುತ್ತದೆ.  ಎರಡು ಬಾರಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಖ್ಯಾತ ವಿಜ್ಞಾನಿ ಲೈನಸ್ ಪೌಲಿಂಗ್ ಒಮ್ಮೆ ಭಾರತಕ್ಕೆ ಬಂದಿದ್ದಾಗ ವಿಕ್ರಂ ಸಾರಾಬಾಯ್ ರವರು ಅವರನ್ನು ದಿಲ್ಲಿಯ ಸುತ್ತಮುತ್ತಲೂ ಇದ್ದ ಕೆಲವು ಉತ್ತಮ ಶಾಲೆಗಳಿಗೆ ಕರೆದುಕೊಂಡು ಹೋಗಿದ್ದರು.  ಮರುದಿನ ಆ ಭೇಟಿಯ ಬಗ್ಗೆ ಪೌಲಿಂಗ್ ಅವರ ಅಭಿಪ್ರಾಯವನ್ನು ಸಾರಾಬಾಯ್ ಕೇಳಿದಾಗ ಪೌಲಿಂಗ್ ಉತ್ತರಿಸಿದ್ದು ಹೀಗೆ; "ಭಾರತೀಯ ಶಾಲೆಗಳಲ್ಲಿ ಪ್ರಥಮ ದರ್ಜೆ ಕಟ್ಟಡಗಳಿವೆ, ದ್ವಿತೀಯ ದರ್ಜೆ ಪ್ರಯೋಗಾಲಯಗಳಿವೆ ಮತ್ತು ತೃತೀಯ ದರ್ಜೆ ಶಿಕ್ಷಕರಿದ್ದಾರೆ." ಪೌಲಿಂಗ್ ತಮ್ಮ ಮಾತನ್ನು ಮುಂದುವರಿಸಿ, "ಶಾಲೆಗಳ ಗ್ರಂಥಾಲಯಗಳಿಗೆ ಭೇಟಿಕೊಟ್ಟಾಗ ಅಲ್ಲಿರುವ ಪುಸ್ತಕಗಳ ಕೊನೆಯ ಪುಟವನ್ನು ತೆರೆದು ನೋಡಿದೆ.  ಅದರಲ್ಲಿ ಎಷ್ಟು ಮಂದಿ ಶಿಕ್ಷಕರು ಆ ಪುಸ್ತಕವನ್ನು ಓದಿದ್ದಾರೆ ಎಂದು ನೋಡಿದೆ; ಆಗ ನನಗೆ ಕೇವಲ ಬೆರಳೆಣಿಕೆಯಷ್ಟು ಹೆಸರುಗಳು ಮಾತ್ರ ಕಂಡವು. ನಿಮ್ಮ ಬಹಳಷ್ಟು ಶಿಕ್ಷಕರ ಕಣ್ಣುಗಳಲ್ಲಿ ವಿಷಯದ ಬಗ್ಗೆ ತಹತಹಿಕೆ ಮತ್ತು ಕುತೂಹಲ ಕಾಣಲಿಲ್ಲ" ಎಂದು ವಿಷಾದಿಸಿದರು.  ನಮಗೆ ನಿಜವಾದ ಶಿಕ್ಷಣವನ್ನು ಆಡಂಬರದ ಸೌಲಭ್ಯಗಳು ನೀಡಲು ಸಾಧ್ಯವಿಲ್ಲ, ಆದರೆ ಒಬ್ಬ ಒಳ್ಳೆ ಶಿಕ್ಷಕ ನೀಡಬಹುದು. 

ಶಿಕ್ಷಣ ಸಮಗ್ರ ಜೀವನಕ್ಕಾಗಿಯೇ ಹೊರತು, ಜೀವನ ನಡೆಸುವುದಕ್ಕಾಗಿ ಅಲ್ಲ.  ಆದ್ದರಿಂದ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವುದರ ಜೊತೆಗೆ, ಜೀವನದಲ್ಲಿ ಕಷ್ಟ, ಸುಖ, ವ್ಯಕ್ತಿ, ವಿಚಾರ ಹೀಗೆ ಅನೇಕ ಸಂದರ್ಭಗಳನ್ನು ಎದುರಿಸುವ ಮತ್ತು ಅದರಿಂದ ಹೊರಬರುವ ಉಪಾಯಗಳನ್ನು ಬೋಧಿಸಬೇಕಾಗಿದೆ.  ಇಂದಿನ ಶಿಕ್ಷಕರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬಹಳಷ್ಟು ಕಡಿಮೆಯಾಗಿದೆ.  ಶಿಕ್ಷಕರು ತಮ್ಮ ಜೀವನದ ಅನುಭವಗಳ ಜೊತೆಗೆ ಪುಸ್ತಕಗಳಲ್ಲಿ ಪಡೆದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಿದಾಗ, ಅದರಿಂದ ಪ್ರೇರಣೆ ಪಡೆದು ವಿದ್ಯಾರ್ಥಿಗಳು ಹೆಚ್ಚು ವಿಷಯ ಸಂಗ್ರಹಣೆಗೆ ಒಲವು ತೋರುತ್ತಾರೆ. ಶಿಕ್ಷಕರು ಪಾಠಮಾಡುವ ಮೊದಲು ಪರಿಶ್ರಮವಹಿಸಿ ಕಲಿಸುವ ವಿಷಯದಲ್ಲಿ ಸಾಧನೆ ಮಾಡಬೇಕಾಗುತ್ತದೆ.   ಸಾಧನೆಯಿಲ್ಲದ ಬೋಧನೆ ಕೇವಲ ವೇದನೆಯಾಗುತ್ತದೆ. ಇದಕ್ಕೇ ಇಂಗ್ಲಿಷ್ ನಲ್ಲಿ "To teach you need a book but to preach you should become a book" ಎಂದು ಹೇಳುವ ಮಾತು ಸೂಕ್ತವೆನಿಸುತ್ತದೆ.  ಯಾವುದೇ ವಿಷಯ ನಮ್ಮಲ್ಲಿ ದೀರ್ಘಕಾಲ ಉಳಿಯಬೇಕಾದರೆ ಮೊದಲು ಆ ವಿಷಯವನ್ನು ಅರ್ಥಮಾಡಿಕೊಳ್ಳಬೇಕು ನಂತರ, ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಅದನ್ನು ಅಳವಡಿಸಿಕೊಳ್ಳಬೇಕು.  ಆಗ ವಿಷಯವು ಕೇವಲ ಮೌಖಿಕ ಸಂಭಾಷಣೆಯಾಗದೆ ಅಂತರಾಳದ ಒಲವಾಗಿ ಚಿಮ್ಮುತ್ತದೆ.  ಶಿಕ್ಷಕರಿಗೆ ಮಾಡುವ ಪಾಠದಲ್ಲಿ ಒಲವು ಇದ್ದಲ್ಲಿ ಕೇವಲ ಅವರ ಬಾಯಿ ಮಾತನಾಡುವುದಿಲ್ಲ, ಅವರ ಸಂಪೂರ್ಣ ವ್ಯಕ್ತಿತ್ವ ಮಾತನಾಡುತ್ತದೆ.  ಇಂತಹ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಅದನ್ನು ದೈನಂದಿನ ಚಟುವಟಿಕೆಯನ್ನಾಗಿಸಲು ಕೆಲವು ಸಂಸ್ಥೆಗಳು ಪ್ರಯತ್ನಿಸುತ್ತಿವೆ.              ಶಿಕ್ಷಕರಿಗೆ ಸೃಜನಶೀಲತೆ, ಸೃಜನಶೀಲ ಬೋಧನೆ, ಕಲಿಕೆಯ ವಿಧಾನಗಳು, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ, ಒಲವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ.  ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ನಲಿ-ಕಲಿ ಪ್ರಯೋಗ. ಇಂತಹ ಕಲಿಕಾ ಮತ್ತು ಬೋಧನಾ ವಿಧಾನಗಳಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಉತ್ಸಾಹ ಮೂಡಿಸಲು ಸಾಧ್ಯವಾಗುತ್ತದೆ.  ನಾವು ದಿನವೂ ಕಾಣುವ ಸಾಮಾನ್ಯ ದೃಶ್ಯವೆಂದರೆ ಮಕ್ಕಳು ಶಾಲೆಗೆ ನಡೆದು ಹೋಗಿ ಮನೆಗೆ ಓಡುತ್ತಾ ಬರುತ್ತಾರೆ.  ಇದನ್ನು ಬದಲಿಸಿ ಮಕ್ಕಳು ಶಾಲೆಗೆ ಓಡುತ್ತಾ ಹೋಗಿ ಮನೆಗೆ ನಡೆದು ಬರುವ ವಾತಾವರಣ ಸೃಷ್ಟಿಸಬೇಕು.  ಆಗ ಮಾತ್ರ ಶಿಕ್ಷಣ ಸಾರ್ಥಕವಾಗುವುದು.  ಇದು ಕೇವಲ ಒಂದು ರಾತ್ರಿಯಲ್ಲಿ ಆಗುವ ಕೆಲಸವಲ್ಲ.  ಆದರೆ ಇದನ್ನು ಕಾರ್ಯಗತಗೊಳಿಸುವ ಕಡೆ ತಕ್ಷಣವೇ ಗಮನ ಹರಿಸಬೇಕು.  ಅದರ ಮೊದಲ ಹೆಜ್ಜೆ ಶಿಕ್ಷಕರ ಸಬಲೀಕರಣ. ಈ ನಿಟ್ಟಿನಲ್ಲಿ ಅವರಿಗೆ ನಿರಂತರ ತರಬೇತಿ ದೊರೆಯಬೇಕು. ಒಂದು ದೇಶದ ಗುಣಮಟ್ಟವನ್ನು ಅಲ್ಲಿನ ಶಿಕ್ಷಣ ಮತ್ತು ಶಿಕ್ಷಕರಿಂದ ಅಳೆಯುತ್ತಾರೆ. ಹೀಗಾಗಿ ಭಾರತವನ್ನು ಉತ್ತಮ ರಾಷ್ಟ್ರವನ್ನಾಗಿಸಲು ಶಿಕ್ಷಣ ವ್ಯವಸ್ಥೆ, ಶಿಕ್ಷಣದ ಗುಣಮಟ್ಟ, ಬೋಧನಾ ವಿಧಾನ, ಶಿಕ್ಷಕರು ಎಲ್ಲವನ್ನೂ, ಎಲ್ಲರನ್ನೂ ಸುಧಾರಿಸಬೇಕು.  ಆ ರೀತಿ ಆದಾಗ ಮಾತ್ರವೇ ಡಾ. ಅಬ್ದುಲ್ ಕಲಾಮ್ ರ ಕನಸು ಎಲ್ಲರ ಕನಸಾಗಿ ಮೂಡಿ, ಅದನ್ನು ನನಸು ಮಾಡಿದ ತೃಪ್ತಿ ಸಿಗುತ್ತದೆ.

1 comment:

  1. Nice and timely article about present education system. I read it once in prajavaani. Now again i read. Good one.

    ReplyDelete