11 April 2011

ಪರದೇಶದಲ್ಲಿ ಪ್ರಾಣಸಂಕಟ

ಕಳೆದ ಎರಡು ವಾರಗಳಿಂದ ಅಮೇರಿಕಾದ ವಿಸ್ಕಾನ್ಸಿನ್ ರಾಜ್ಯದ ಮ್ಯಾಡಿಸನ್ ನಗರದಲ್ಲಿ ಉನ್ನತ ಸಂಶೋಧನೆಗಾಗಿ ಬಂದಿರುವ ನಾನು ಯಾವುದೇ ತೊಂದರೆಗಳಿಲ್ಲದೆ ಕೆಲಸವನ್ನು ನಿರ್ವಹಿಸುತ್ತಿದ್ದೆ.  ನನಗೆ ಮೊದಲಿನಿಂದಲೂ ಕ್ರಿಕೆಟ್ ಎಂದರೆ ಪಂಚಪ್ರಾಣ.  ಅದಕ್ಕಾಗಿ ಏನುಬೇಕಾದರು, ಯಾರನ್ನಾದರೂ ಬಿಡುತ್ತಿದ್ದೆ.  ನಾನು ಶಾಲೆ, ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಈ ವಿಷಯವಾಗಿ ಮನೆಯವರಿಂದ ಹಲವಾರು ಬಾರಿ ಬೈಗುಳ ತಿಂದದ್ದು ಉಂಟು. ಮ್ಯಾಡಿಸನ್ ಗೆ ಬಂದಾಗಿನಿಂದ ನನ್ನ ಹಲವು ಸ್ನೇಹಿತರ ಬಳಿ ಇಲ್ಲಿ ಕ್ರಿಕೆಟ್ ಆಡುತ್ತಾರ, ಎಲ್ಲಿ ಆಡುತ್ತಾರೆ, ಅವರೊಂದಿಗೆ ಆಡಲು ಯಾರನ್ನು ಸಂಪರ್ಕಿಸಬೇಕು ಎಂದು ಕೇಳುತ್ತಿದ್ದೆ.  ಇದರ ಸಲುವಾಗಿ ಕೆಲವೊಮ್ಮೆ ಅಂತರ್ಜಾಲದಲ್ಲೂ ಹುಡುಕುತ್ತಿದ್ದೆ.  ಇಸ್ಟೆಲ್ಲಾ ಆದಮೇಲೆ ಕೊನೆಗೆ ಮ್ಯಾಡಿಸನ್ ಕ್ರಿಕೆಟ್ ಕ್ಲಬ್ ಸದಸ್ಯರಿಗೆ ಒಂದು ಮಿಂಚಂಚೆಯನ್ನು (email) ಕಳುಹಿಸಿದೆ.  ಆ ಕ್ಲಬ್ಬಿನ ಅಧ್ಯಕ್ಷರು ಎಲ್ಲಾ ಸದಸ್ಯರಿಗೂ ನನ್ನ ಆಸಕ್ತಿಯನ್ನು ತಿಳಿಸಿದರು.  ಕೆಲವೇ ನಿಮಿಷಗಳಲ್ಲಿ ಮೂವರು ನನ್ನನ್ನು ದೂರವಾಣಿಯ ಮುಖಾಂತರ ಸಂಪರ್ಕಿಸಿ ತಮ್ಮ ತಂಡಕ್ಕೆ ಸೇರುವಂತೆ ಕೋರಿದರು.  ನಾನು ಕೂಡ ಉತ್ಸಾಹದಲ್ಲಿ ಒಂದು ತಂಡಕ್ಕೆ ಆಡಲು ಒಪ್ಪಿ ಆಡುವ ಸ್ಥಳ ಮತ್ತು ಸಮಯವನ್ನು ಕೇಳಿ ತಿಳಿದುಕೊಂಡೆ.  ಅವರು ಹೇಳಿದ ಆ ಸ್ಥಳವು ದೂರವಿದ್ದುದರಿಂದ ಅವರಲ್ಲಿ ಯಾರಾದರು ನನ್ನನ್ನು ಕರೆದೊಯ್ಯುವಂತೆ ಕೇಳಿದೆ.  ಅದಕ್ಕೆ ಅವರಲ್ಲಿ ಶ್ರೀಧರ್ ಎಂಬುವನು ನನ್ನನ್ನು ಕರೆದೊಯ್ಯಲು ಒಪ್ಪಿದ.  ಅದರಂತೆ ಆವನು ನಾನಿರುವ ಮನೆಗೆ ಬಂದು ನನ್ನನ್ನು ತನ್ನ ಕಾರಿನಲ್ಲಿ ಕರೆದೊಯ್ದ.  ನಾವು ಅಭ್ಯಾಸ ಮಾಡಲು ಹೋಗುತ್ತಿದ್ದ ಮೈದಾನವು ನಗರದ ಹೊರವಲಯದಲ್ಲಿ ಇದ್ದುದರಿಂದ ಸುಮಾರು ೨೦ ನಿಮಿಷ ಪ್ರಯಾಣ ಮಾಡಿ ಆ ಜಾಗವನ್ನು ಸೇರಿದೆವು.  ಅಲ್ಲಿ ಎಲ್ಲರ ಪರಿಚಯ ಮಾಡಿಕೊಂಡೆ.  ಆ ತಂಡದ ಸದಸ್ಯರೆಲ್ಲರೂ ಆಂಧ್ರ ಪ್ರದೇಶದವರಾದ್ದರಿಂದ ಎಲ್ಲರೂ ತೆಲುಗು ಮಾತನಾಡುತ್ತಿದ್ದರು.  ನನಗೂ ೭೦% ತೆಲಗು ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಬರುತ್ತಿದ್ದರಿಂದ ಅವರೊಡನೆ ಸಂಭಾಷಣೆ ನಡೆಸುವುದು ಕಷ್ಟವಾಗಲಿಲ್ಲ.  ನಂತರ ಅಭ್ಯಾಸ ನಡೆಸಲು ಆರಂಭಿಸಿದೆವು.  ನಾನು ಮೊದಲಿಗೆ ಒಂದು ಓವರ್ ಬೌಲ್ ಮಾಡಿ ಮತ್ತೊಂದು ಓವರ್ ಫೀಲ್ಡ್ ಮಾಡಿದೆ.  ಇದಾದಮೇಲೆ ಆ ತಂಡದ ಹಿರಿಯರೊಬ್ಬರು ನನಗೆ ಬ್ಯಾಟ್ ಮಾಡಲು ಹೇಳಿದರು.  ಪ್ರತಿಯೊಬ್ಬರಿಗೂ ಎರಡು ಓವರ್ ಆಡುವ ಅವಕಾಶ.  ಇದರಲ್ಲಿ ಎಷ್ಟು ರನ್ ಬೇಕಾದರೂ ಮಾಡಬಹುದು ಎಂದು ಹೇಳಿದರು.  ನಾನು ಆಗಲಿ ಎಂದು ಬ್ಯಾಟ್ ಹಿಡಿದು ನಿಂತೆ.  ನಾನು ಎಡಗೈ ಆಟಗಾರನಾದ್ದರಿಂದ ಅದಕ್ಕೆ ತಕ್ಕಂತೆ ಗಾರ್ಡ್ ತೆಗೆದುಕೊಂಡು ಮೊದಲ ಎಸೆತವನ್ನು ಆಡಲು ಸಜ್ಜಾಗಿ ನಿಂತೆ.  ಆರೀತಿ ನಿಂತೊಡನೆ ಬೆನ್ನಿನ ಕೆಳಭಾಗದಲ್ಲಿ ಸ್ವಲ್ಪ ಉಳುಕಿದಂತೆ ತೋರಿತು.  ನಾನು ಕ್ರಿಕೆಟ್ ಆಡಿ ಹೆಚ್ಚು ಸಮಯವಾದ್ದರಿಂದ ಏನೋ ಸಣ್ಣ ಉಳುಕು ಇರಬಹುದೆಂದು ನಿರ್ಲಕ್ಷಿಸಿ ಆಡಲು ಮುಂದುವರೆಸಿದೆ.  ಮೊದಲ ಎಸೆತದಲ್ಲಿ ಒಂದು ರನ್ ಓಡಿ ಮತ್ತೆ ಕ್ರೀಸ್ ಬಳಿ ಬಂದು ನಿಂತೆ.  ಎರಡನೆ ಎಸೆತ ಆಡುವಾಗ ಬೆನ್ನಿನ ಕೆಳಭಾಗದಲ್ಲಿ ಸ್ವಲ್ಪ ಎಳೆದಂತೆ ತೋರಿತು.  ಆದರೂ ಇನ್ನೊಂದು ರನ್ ನಿಧಾನವಾಗಿ ಓಡಿ ಮತ್ತೆ ಕ್ರೀಸ್ ಬಳಿ ಬಂದು ನಿಂತೆ.  ಮೂರನೇ ಎಸೆತ ಬಂದೊಡನೆ ಅದನ್ನು ಆಡಲು ಯತ್ನಿಸಿ ನಿಧಾನವಾಗಿ ಒಂದು ಕೈಯಲ್ಲಿ ಚಂಡನ್ನು ಹೊಡೆದು ಬ್ಯಾಟ್ ಕೆಳಗೆ ಬಿಟ್ಟೆ.  ಆಗಲೇ ಬೆನ್ನಿನ್ನ ಕೆಳಭಾಗದ ನೋವು ಹೆಚ್ಚಾಯಿತು.  ಇನ್ನು ಮುಂದೆ ಆಡಲು ಆಗುವುದಿಲ್ಲ ಎಂದು ಹೇಳಿ ಒಂದು ಕೊನೆಯಲ್ಲಿ ಹೋಗಿ ಕುಳಿತೆ.  ಆ ನೋವು ಏನೋ ಸಣ್ಣ ಉಳುಕು ಇರಬಹುದೆಂದು ಸ್ವಲ್ಪ ವ್ಯಾಯಾಮ ಮಾಡಿದೆ.  ಆದರೂ ಅದು ಕಡಿಮೆಯಾಗಲಿಲ್ಲ.  ಅಲ್ಲಿಗೆ ನನ್ನ ಗ್ರಹಚಾರ ಕೆಟ್ಟಿತ್ತು.  ಆಟ ಮುಗಿದ ನಂತರ ಮೈದಾನದ ಎದುರಿಗೆ ಇದ್ದ ಒಬ್ಬ ಸದಸ್ಯರ ಮನೆಗೆ ಹೋಗಿ ನನ್ನ ನೋವಿಗೆ ಪ್ರಥಮ ಚಿಕಿತ್ಸೆಯ ರೂಪದಲ್ಲಿ ನೋವು ನಿವಾರಕ ದ್ರವ್ಯವನ್ನು ಲೇಪಿಸಿ, ಒಂದು ಗುಳಿಗೆಯನ್ನು ನುಂಗಿದೆ.  ಇಸ್ಟೆಲ್ಲಾ ಆದಮೇಲೆ ಏನೋ ಸಣ್ಣ ನೋವು ಇರಬಹುದು, ರಾತ್ರಿ ಮಲಗಿ ಮುಂಜಾನೆ ಏಳುವ ವೇಳೆಗೆ ಸರಿಯಾಗಬಹುದು ಎಂದು ನನ್ನನ್ನು ಮನೆಯಿಂದ ಕರೆದೊಯ್ದ ಶ್ರೀಧರ್ ಪುನಃ ನನ್ನನ್ನು ಮನೆಗೆ ತಂದು ಬಿಟ್ಟರು.  ಮನೆಗೆ ಬರುವ ದಾರಿಯಲ್ಲೇ ಅವರು ಒಮ್ಮೆ ವೈದ್ಯರ ಬಳಿ ಹೋಗೋಣವೆ ಎಂದು ಕೇಳಿದರು.  ನಾನೇ ನಾಳೆಯವರೆಗೂ ನೋಡೋಣ ಎಂದು ಹೇಳಿದೆ.  ಈ ರೀತಿ ಹೇಳಲು ಇನ್ನೊಂದು ಕಾರಣವು ಇದೆ.  ಅಮೇರಿಕಾದಲ್ಲಿ ವಿಮೆ ಇಲ್ಲದೆ ವೈದ್ಯರ ಬಳಿ ಹೋದರೆ ನೂರಾರು ಡಾಲರ್ ಶುಲ್ಕ ಕೇಳುತ್ತಾರೆ.  ಇನ್ನೂ ಕೆಲವೊಮ್ಮೆ, ಪೂರ್ವಾನುಮತಿ ಇಲ್ಲದೆ ವೈದ್ಯರಲ್ಲಿಗೆ ಹೋಗುವುದು ತುಂಬಾ ಕಷ್ಟ ಮತ್ತು ಕೆಲವರು ವಿಮೆ ಇಲ್ಲದವರನ್ನು ಚಿಕಿತ್ಸೆ ಮಾಡುವುದಿಲ್ಲ.  ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಒಂದು ರಾತ್ರಿ ಕಳೆದು ನೋಡೋಣಾ ಎಂದು ಮನೆಗೆ ಬಂದು ಮಲಗಿದೆ.  ಮರುದಿನ ಬೆಳಿಗ್ಗೆ ಎದ್ದಾಗ ಆ ನೋವು ಇನ್ನೂ ಹಾಗೆ ಇತ್ತು.  ಮೊದಲಿಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಮತ್ತೆ ಬಂದು ಮಲಗಿದೆ.  ನಂತರ ಸುಮಾರು ೮.೩೦ ರ ವೇಳೆಗೆ ನೋವು ಹೆಚ್ಚಾಯಿತು.  ಆಗ ನನ್ನ ಜೊತೆವಾಸಿ ರೋಹಿತನಿಗೆ (room mate) ನನ್ನ ಪರಿಸ್ಥಿತಿಯನ್ನು ವಿವರಿಸಿದೆ.  ನಾನು ಇಲ್ಲಿಗೆ ಹೊಸದಾಗಿ ಬಂದಿದ್ದರಿಂದ ಅವನು ವಿಮೆ ಕಂಪನಿಗೆ ಕರೆಮಾಡಿ ಅದರ ಸೌಲಭ್ಯಗಳನ್ನು ತಿಳಿದುಕೊಂಡ.  ನಂತರ ಒಂದು ಟಾಕ್ಸಿಗೆ ಕರೆಮಾಡಿ ಮನೆಗೆ ಬರುವಂತೆ ಹೇಳಿದ.  ಆ ಟಾಕ್ಸಿ ಬರುವ ವೇಳೆಗೆ ಅವನು ತಯಾರಾಗಿ ನನ್ನ ಬಳಿ ಇದ್ದ ಎಲ್ಲ ವಿಮೆ ಪತ್ರಗಳನ್ನು ತೆಗೆದುಕೊಂಡು ವೈದ್ಯರ ಬಳಿ ಹೋಗಲು ಸಿದ್ಧರಾದೆವು.  ಟಾಕ್ಸಿ ಬಂದೊಡನೆ ನಮ್ಮ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಹೋದೆವು.  ಅದು ನಮ್ಮ ಮನೆಯಿಂದ ಕಾರಿನಲ್ಲಿ ೧೦ ನಿಮಿಷದ ದಾರಿ.  ಇದಕ್ಕೆ ಟಾಕ್ಸಿದರ ೫ ಡಾಲರ್.  ಆ ಟಾಕ್ಸಿಯನ್ನು ಕಳುಹಿಸಿದ ನಾವು ೫ ನೇ ಮಹಡಿಯಲ್ಲಿರುವ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಹೋಗುತ್ತಿದ್ದಾಗ ನನ್ನ ಸ್ನೇಹಿತನ ಪರಿಚಯದ ಒಬ್ಬ ಅಮೇರಿಕಾದ ಮಹಿಳೆ ಸಿಕ್ಕಿ ನಮನ್ನು ಮಾತನಾಡಿಸಿದರು.  ಅವರು ನನ್ನ ಪರಿಸ್ಥಿತಿಯನ್ನು ಕೇಳಿ ಸಾಂತ್ವನ ಹೇಳಿ ನಮ್ಮ ಜೊತೆಯಲ್ಲೇ ೫ ನೇ ಮಹಡಿಗೆ ಬಂದು ಚಿಕಿತ್ಸೆಯ ಬಗ್ಗೆ ವಿಚಾರಿಸಿದರು.  ಆದರೆ ಅಲ್ಲಿನ ವೈದ್ಯರು ಇಲ್ಲಿ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಚಿಕಿತ್ಸೆ ನೀಡುವುದಾಗಿ ಹೇಳಿದರು.  ನಾನು ಪೋಸ್ಟ್ ಡಾಕ್ಟೊರಲ್ ಫೆಲೋ ಆದ್ದರಿಂದ ಅದು ಸಿಭಂದಿವರ್ಗಕ್ಕೆ ಸೇರುವುದಾಗಿ ಹೇಳಿದರು.  ಆಗ ಆ ಅಮೇರಿಕಾದ ಮಹಿಳೆ ತನ್ನ ಕಾರಿನಲ್ಲೇ ಇನ್ನೊಂದು ತುರ್ತು ಚಿಕಿತ್ಸಾ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದರು.  ನಾವು ಅವರಿಗಾಗಿ ಕೆಳಗೆ ಕಾಯುತ್ತಾ ನಿಂತಿದ್ದೆವು.  ಅವರು ೫ ನಿಮಿಷದಲ್ಲಿ ಅವರಿಗಿದ್ದ ಕೆಲಸ ಮುಗಿಸಿ ಬಂದು ನಮನ್ನು ಅವರ ಕಾರಿನಲ್ಲೇ ಆ ತುರ್ತು ಚಿಕಿತ್ಸಾ ಆಸ್ಪತ್ರೆಗೆ ಕರೆದುಕೊಂಡು ಹೋದರು.  ಅಲ್ಲಿಗೆ ಹೋಗುವ ದಾರಿಯಲ್ಲಿ ಅವರು ಕಾರಿನಲ್ಲಿ ಸ್ಪಾನಿಶ್ ಸಂಗೀತವನ್ನು ಕೇಳಿಸುತ್ತಿದ್ದರು ಮತ್ತು ನನಗೆ ನೋವಿನ ಮೇಲೆ ಗಮನ ಕೊಡದೆ ಹಾಡಿನ ಮೇಲೆ ಗಮನ ನೀಡುವಂತೆ ಹೇಳುತ್ತಿದ್ದರು.  ಅವರು ಮತ್ತು ಅವರ ಮನೆಯವರು ಸಂಗೀತ ಪ್ರೇಮಿಗಳೆಂದು ನನ್ನ ಸ್ನೇಹಿತ ಹೇಳಿದ್ದ.  ಅದರಂತೆ ಅವರು ಆ ಹಾಡಿನ ತಾಳಕ್ಕೆ ತಕ್ಕಂತೆ ಕೈ ಕಾಲುಗಳನ್ನು ಆಡಿಸುತ್ತಿದ್ದರು.  ಕೊನೆಗೆ ಆ ತುರ್ತು ಚಿಕಿತ್ಸಾ ಆಸ್ಪತ್ರೆಗೆ ಬಂದಿಳಿದ ನಾವು, ಒಳಗೆ ಹೋಗುವುದರ ಬಗ್ಗೆ ಯೋಚಿಸುತ್ತಿದ್ದೆವು.  ಆಗ ನನ್ನ ನೋವು ಎಷ್ಟು ಹೆಚ್ಚಾಗಿತ್ತೆಂದರೆ ನನಗೆ ನಡೆಯಲು ಆಗುತ್ತಿರಲಿಲ್ಲ.  ಆಗ ಅಲ್ಲಿದ್ದ ಒಬ್ಬ ದಾದಿಯನ್ನು ಕರೆದು ಒಂದು ಗಾಲಿಕುರ್ಚಿಯಲ್ಲಿ ನನ್ನನ್ನು ಒಳಗೆ ಕರೆದುಕೊಂಡು ಹೋದರು.  ಒಳಗೆ ಹೋಗುತ್ತಾ ದಾರಿಯಲ್ಲಿ ಆ ದಾದಿ ನನ್ನನ್ನು ಇದು ಹೇಗಾಯಿತೆಂದು ಕೇಳಿದರು.  ನಾನು ಕ್ರಿಕೆಟ್ ಆಡುವಾಗ ಎಂದು ಹೇಳಿದೆ.  ಅದಕ್ಕೆ ಆ ದಾದಿಯು ಆಶ್ಚರ್ಯದಿಂದ ಇಲ್ಲಿ ಕ್ರಿಕೆಟ್ ಆಡುತ್ತಾರ, ಮೈದಾನ ಎಲ್ಲಿದೆ, ಆ ತಂಡದ ಹೆಸರೇನು ಎಂದು ಕೇಳಿದರು.  ನಾನು ಅದರ ವಿವರ ಹೇಳಿದಮೇಲೆ ಆಕೆ ನನಗೆ ಇಲ್ಲಿ ಕ್ರಿಕೆಟ್ ಆಡುವ ವಿಷಯವೇ ಗೊತ್ತಿರಲಿಲ್ಲ ಎಂದು ಹೇಳಿದರು.  ಅಲ್ಲಿ ಅವರ ನಿಯಮಗಳನ್ನು ಪೂರ್ಣಗೊಳಿಸಿ ಒಬ್ಬ ದಾದಿಗಾಗಿ ಕಾಯಲು ಸೂಚಿಸಿದರು.  ೫ ನಿಮಿಷದ ನಂತರ ನನ್ನನ್ನು ಒಳಗೆ ಕರೆದೊಯ್ದು ನನ್ನ ಬಟ್ಟೆ ಬದಲಾಯಿಸಿ ಗೌನ್ ಧರಿಸಿ ಮಂಚದಮೇಲೆ ಮಲಗಲು ಸಹಾಯ ಮಾಡಿದರು.  

 ಆ ಮಂಚದ ಮೇಲೆ ಮಲಗಿದ ನನ್ನನ್ನು ಒಬ್ಬ ಸೋದರ ಬಂದು ಇಂಟ್ರ ವೀನಲ್ ಮದ್ದು ಕೊಟ್ಟು ಮತ್ತೆ ಸೋದರಿ ಬಂದು ನೋವು ನಿವಾರಕ ಮದ್ದು ಕೊಡುವಳು ಎಂದು ಹೇಳಿದನು.  ಇದಾದ ೫ ನಿಮಿಷದ ಬಳಿಕ ಸೋದರಿಯು ಬಂದು ನನಗೆ ನೋವು ನಿವಾರಕ ಮದ್ದು ಕೊಟ್ಟು ಹಾಗೆ ಸ್ವಲ್ಪ ಹೊತ್ತು ಮಲಗಿರುವಂತೆ ಹೇಳಿದಳು.  
      

ಆ ನೋವು ನಿವಾರಕ ಮದ್ದಿನಿಂದ ನಾನು ಸ್ವಲ್ಪ ಹೊತ್ತು ಮಲಗಿದೆ.  ಸುಮಾರು ಅರ್ಧ ಗಂಟೆಯ ನಂತರ ವೈದ್ಯರು ಬಂದು ನನ್ನ ನೋವಿನ ಬಗ್ಗೆ ವಿಚಾರಿಸಿದರು.  ಅವರು ಅಕರ್ಣಕ ಸಾಧನ (stethoscope) ಇಟ್ಟು ನನ್ನನ್ನು ಪರೀಕ್ಷೆ ಮಾಡಿ ನೀವು ಆರೋಗ್ಯವಾಗಿದ್ದೀರ ಎಂದು ಹೇಳಿ ಅವರು ಹೊರಟುಹೋದರು.  ಇದಾದ ನಂತರ ಸೋದರಿಯು ಬಂದು ಮತ್ತೆ ನೋವು ನಿವಾರಕ ಮದ್ದು ಕೊಟ್ಟು ಸ್ವಲ್ಪ ಹೊತ್ತು ಮಲಗಿ ಎಂದಳು.  

ಇದೆಲ್ಲಾ ಆದದ್ದು ಬೆಳಿಗ್ಗೆ ೧೦.೩೦ ರಿಂದ ಸಂಜೆ ೪.೩೦ ವರೆಗೆ.  ಸಂಜೆ ೪.೩೦ ರ ಹೊತ್ತಿಗೆ ನನ್ನನ್ನು ಬಲವಂತವಾಗಿ ಎಬ್ಬಿಸಿದ ದಾದಿ ನಿಮ್ಮನ್ನು ಇಲ್ಲಿಂದ ಕಳಸಿಕೊಡಲು ಆಜ್ಞೆಯಾಗಿದೆ ಎಂದು ಹೇಳಿದಳು.  ಆದರೆ ನನಗೆ ನಿದ್ದೆ ತಾರಕಕ್ಕೆ ಏರುತಿತ್ತು ಮತ್ತು ಆ ಮದ್ದಿನ ಮಂಪರು ಹಾಗೆ ಇತ್ತು.  ಹೀಗಾಗಿ ನನಗೆ ಕಷ್ಟವಾದರೂ ಬಲವಂತವಾಗಿ ಹೊರಗೆ ಹೋಗಲು ಹೇಳಿದರು.  ಆ ಹೊತ್ತಿಗಾಗಲೇ ನನ್ನ ಸ್ನೇಹಿತ ತಂದುಕೊಟ್ಟ ಕೇಕು ಮತ್ತು ಹಣ್ಣು ತಿಂದಿದ್ದೆ.  ನಾನು ಹೊರಗೆ ಬರಲು ಬಟ್ಟೆ ಧರಿಸುತ್ತಿದ್ದಾಗ ಆ ಮದ್ದಿನ ಮಂಪರು ಇನ್ನೂ ಇದ್ದುದರಿಂದ ಅದು ವಾಂತಿಯಾಗಿ ತಿಂದದೆಲ್ಲಾ ಹೊರಗೆ ಬಂದಿತು.  ನಂತರ ಬಾಯಿ ತೊಳೆದುಕೊಂಡು ಹೊರಗೆ ಕೂರುವ ಜಾಗಕ್ಕೆ ಬಂದು ನನ್ನ ಸ್ನೇಹಿತನಿಗಾಗಿ ಕಾಯುತ್ತಾ ಕುಳಿತೆ.  ಅಲ್ಲಿಯೂ ಮತ್ತೆ ವಾಂತಿಯಾಯಿತು.  ಅಲ್ಲಿ ನನಗೆ ವಾಶ್ ಬೇಸಿನ್ ತನಕ ಹೋಗಲು ಆಗಲಿಲ್ಲ.  ಆಗ ಅಲ್ಲಿದ್ದ ಒಬ್ಬ ಸೇವಕ ಬಂದು ಒಂದು ಪ್ಲಾಸ್ಟಿಕ್ ಪಾತ್ರೆ ಕೊಟ್ಟು ಮತ್ತೆ ವಾಂತಿಯಾದರೆ ಇದರಲ್ಲಿ ಮಾಡಿ ಎಂದು ಹೇಳಿದ.  ಬಳಿಕ ಅಲ್ಲಿಯೇ ಕುಳಿತು ನನ್ನ ಸ್ನೇಹಿತ ಬರುವತನಕ ತೂಕಳಿಸುತ್ತಿದ್ದೆ.  ಕೆಲವು ನಿಮಿಷಗಳಲ್ಲೇ ನನ್ನ ಸ್ನೇಹಿತ ಬಂದು ಟ್ಯಾಕ್ಸಿ ತಂದಿದ್ದೇನೆ ಮನೆಗೆ ಹೋಗೋಣ ನಡಿ ಎಂದು ಎಬ್ಬಿಸಿ ಕರೆದೊಯ್ದ.  ಇಸ್ಟೆಲ್ಲಾ ಆದಮೇಲೆ ಕೊನೆಗೆ ಮನೆಗೆ ಬಂದು ಸೇರಿದೆವು.  ಆ ನೋವು ನನ್ನ ಶತ್ರುವಿಗೂ ಬೇಡ ದೇವರೇ ಎಂದು ಬೇಡಿಕೊಂಡೆ.  ಆ ನೋವಿಗೆ ಗುಳಿಗೆ ತೆಗೆದುಕೊಳ್ಳುತ್ತಿರುವುದರಿಂದ ಈಗ ಸ್ವಲ್ಪ ಕಡಿಮೆಯಾಗಿದೆ.  ಮೊದಲೆರಡು ದಿನ ನನಗೆ ಒಬ್ಬನೇ ನಡೆಯಲೂ ಆಗುತ್ತಿರಲಿಲ್ಲ.  ಪ್ರತಿಯೊಂದಕ್ಕೂ ನನ್ನ ಸ್ನೇಹಿತರನ್ನು ಅವಲಂಭಿಸಬೇಕಾಗಿತ್ತು. ಆ ಸ್ನೇಹಿತರು ಅವರ Ph.D ಕೊನೆಯಹಂತದಲ್ಲಿ ಇರುವುದರಿಂದ ಅವರು ಹೆಚ್ಚು ಸಮಯ ಲ್ಯಾಬಿನ ಕೆಲಸದಲ್ಲಿ ಕಳೆಯುತ್ತಾರೆ.  ಹೀಗಾಗಿ ನನ್ನ ಪರಿಸ್ಥಿತಿ ಶೋಚನೀಯವಾಗಿತ್ತು.  ಇದು ಒಂದು ರೀತಿ ಪ್ರಾಣ ಸಂಕಟವು ಆಗಿತ್ತು.  ಈ ಲೇಖನದ ಮುಖಾಂತರ ನನ್ನ ನೋವಿನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.  

ನಿಮ್ಮ ಆತ್ಮೀಯ ಗೆಳೆಯ,
     ಸಂತೋಷ್  

12 comments:

  1. Dear Dr. Santhosh,

    I hope you have recovered now.. Take care..

    ReplyDelete
  2. Dear Shivu,

    Yes, I am better now. Thanks for the quick comment.

    ReplyDelete
  3. Maga....veg tindu tindu weak agidya....pork chicken thinnu...yaav novu barolla....just kidding...U cannot behave as a teenager dude...ur an Uncle now...excersise madi...

    ReplyDelete
  4. Dear Sumi,

    Uncle ennu aagilla. I did not exercise for the past 2.5 weeks since I came to USA. That was the problem and a bit of cold added to it.

    ReplyDelete
  5. Howdu Santhosh,

    Truth is always bitter. But nimge vayassaitu. Hogli bidi,
    Cricket aadokoo munche 1 week haage exercise maadabekittu.

    Anyways nimege age aagtha iro suchane sikkittalla.

    Take care

    ReplyDelete
  6. Hi Santosh,
    Shocked to hear about the incident. Pray for your quick recovery and hope you would be back to normalcy. It reminds me of a similar incident, when I tried to show cart-wheel (head-over-heals) to my son, quite adventorously, ending up with severe back pain which lasted for a week. Please take of your-self. Get well soon

    ReplyDelete
  7. Dear Nagaraj,

    I will do exercise but dont forget even you are also getting old with me.

    ReplyDelete
  8. Dear Upendra uncle,

    Thanks for the comment. I am better now and have recovered well.

    ReplyDelete
  9. Get well soon & Take care Santosh.. :)

    ReplyDelete
  10. Dear Pradeep Sir,

    Thank you. Keep visiting.

    ReplyDelete
  11. Ega hegiddeera sir? Novu kammi aagidya? jagrathe ella vishyadalli sir...avasara madbedi..

    ReplyDelete
  12. Dear Appu,

    I am fine now. The pain is healing slowly. Thanks for the comments. Keep reading.

    ReplyDelete