06 January 2010

ಮಾತೆ ವೀರಳೋ ಅಥವ ಮಕ್ಕಳು ವೀರರೋ!

ನಮ್ಮ ಸಮಾಜದಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ಗಮನಿಸಿದರೆ, ನಮ್ಮ ಹಿರಿಯರ ಕಾಲದಲ್ಲಿ ಆಚರಣೆಯಲ್ಲಿ ಇದ್ದ ಹಲವು ಕಾರ್ಯಗಳು ಅದರ ನಿಜವಾದ ಮೌಲ್ಯಗಳನ್ನು ತಿಳಿಯದೆ ಅನುಸರಿಸಿದರೆ ಅದು ಅವಹೇಳನಕ್ಕೆ ಎಡೆ ಮಾಡಿಕೊಡುತ್ತದೆ.  ಹಿಂದೆ ಯಾರೋ ತುಂಬಾ ಶಿಸ್ತಿನಿಂದ ಇದ್ದರಂತೆ, ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರಂತೆ, ಎಂದೆಲ್ಲ ತಿಳಿದು ನಾನು ಅವರಂತೆ ಆಗುತ್ತೇನೆ ಅಂತ ಹೊರಟು ಅದನ್ನು ಸಮಾಜಕ್ಕೆ ತೋರಿಸಲೆಂದು ಮೇಲ್ನೋಟಕ್ಕೆ ಎರಡೋ, ಮೂರೋ ದಿನ ಅದನ್ನು ಪಾಲಿಸಿದಂತೆ ತೋರ್ಪಡಿಸುವರು ಹಲವು ಮಂದಿ ಇದ್ದಾರೆ.  ಈ ರೀತಿಯ ಪಾಲಿಕೆಯನ್ನು ಅವರು ಅಪೇಕ್ಷಿಸುವಂತೆ ಯಾರೂ ಗಮನಿಸರು ಏಕೆಂದರೆ ನಟನೆಯು ಎಂದಿಗೂ ನಿಜವೆಂದು ಅನಿಸದು.   

      ಇನ್ನೂ  ಕೆಲವರು ತಮ್ಮ ಹಿರಿಯರ ಹೆಗ್ಗಲಿಕೆಯನ್ನೇ ಹೇಳಿಕೊಂಡು ತಿರುಗುತ್ತಾರೆ ಹೊರತು ತಮ್ಮ ಇಂದಿನ ಪರಿಸ್ಥಿತಿಯ ಬಗ್ಗೆ ಯೋಚಿಸುವುದಿಲ್ಲ.  ಉದಾ: ನನ್ನ ಅಜ್ಜ ಆವರ ಕಾಲದಲ್ಲಿ ಆನೆಯ ಮೇಲೆ ಕೂತು ಓಡಾಡುತ್ತಿದ್ದರು, ನನ್ನ ಅಪ್ಪ ಆವರ ಕಾಲದಲ್ಲಿ ಕುದುರೆಯ ಮೇಲೆ ಕೂತು ಓಡಾಡುತ್ತಿದ್ದರು ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಇಂದು ಅವನ ಸ್ಥಿತಿ ಏನು ಎಂದು ನೋಡಿದಾಗ ಕಾಲಿಗೆ ಚಪ್ಪಲಿಯೇ ಇಲ್ಲ.  ಆತ ತನ್ನ ಹಿರಿಯರ ಹೊಗಳುಬಟ್ಟನಾದನೆ ಹೊರತು ತನ್ನನ್ನು ಅವರಂತೆ ಉನ್ನತ ಸ್ಥಾನಕ್ಕೆ ಬೆಳೆಸಿಕೊಳ್ಳುವ ದಾರಿ ಯೋಚಿಸಲಿಲ್ಲ.  ಇನ್ನೊಂದು ಪರಿಯನ್ನು ನೋಡಿದರೆ ನವೆಂಬರ್ ೧, ಬಂದಕೂಡಲೇ ಎಲ್ಲಿಲ್ಲದ ರಾಜ್ಯಾಭಿಮಾನ, ದೇಶಾಭಿಮಾನ ವ್ಯಕ್ತಪಡಿಸುತ್ತಾರೆ.  ಆ ಇಡೀ ತಿಂಗಳು ಅದರ ಸಂಭ್ರಮ ಇರುತ್ತದೆ.  ನಾವು "ವೀರ ಭಾರತ ಮಾತೆಯ ಪುತ್ರರು", ಎಂದೆಲ್ಲಾ ಹೇಳುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಭಾರತ ಮಾತೆ ವೀರಳಿದ್ದಾಳೆ; ಅದನ್ನು ಹೇಳುವ ಅವಶ್ಯಕತೆ ಇಲ್ಲ.   "ವೀರ ಭಾರತ ಮಾತೆಯ ಪುತ್ರರು" ಆಗುವ ಬದಲು "ಭಾರತ ಮಾತೆಯ ವೀರ ಪುತ್ರರಾಗಬೇಕು" ಎಂಬ ವಿಷಯವನ್ನು ಅರಿಯುವುದು ಮುಖ್ಯ.  

         ಕೆಲವರು ಕಾರ್ಯವೈಖರಿಯಲ್ಲಿ  ತುಂಬಾ ಉದಾಸೀನರು.  ಕೆಲಸವನ್ನು ಮುಂದೂಡುತ್ತಾ ಹೋಗುತ್ತಿರುತ್ತಾರೆ.  ಒಂದು ದಿನದಲ್ಲಿ ಆಗುವ ಕೆಲಸವನ್ನು ಒಂದು ತಿಂಗಳಾದರೂ ಮಾಡದೆ ಮುಂದೂಡುತಿರುತ್ತಾರೆ.  ಇವರ ಜೊತೆಯಲ್ಲಿ ವೇಗವಾಗಿ ಕೆಲಸ ಮಾಡಿಕೊಂಡು ನಡೆವವರ ಪಾಡು ನೋಡಲಾಗದು.  ಕೆಲಸ ಮುಂದೂದುವವರು, ಅದನ್ನು ಅಚ್ಚುಕಟ್ಟಾಗಿ ಮಾಡುವವರನ್ನು ಕಂಡು ಅಪಹಾಸ್ಯ ಮಾಡುತ್ತಾರೆ.  ನಮ್ಮ ಭಾರತದಲ್ಲಿ चलता हे, ಎನ್ನುವ ರೂಡಿ ಬೆಳೆದುಬಿಟ್ಟಿದೆ.  ಇದು ಅನೇಕ ವಿದೇಶಿಯರ ಅಭಿಪ್ರಾಯ ಕೂಡ.  ಆದ್ದರಿಂದಲೇ ನಮ್ಮ ಸರ್ಕಾರಿ ಕಛೇರಿಗಳಲ್ಲಿ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿರುವುದು.  ಇವರ ಮಧ್ಯೆ ಕೆಲಸಮಾಡುವ ಕೆಲವು ಸಮಯಪ್ರಜ್ಞೆ ಉಳ್ಳವರು ಅವಹೇಳನಕ್ಕೆ ಒಳಗಾಗುತ್ತಾರೆ (When you are perfect in executing any work and expect the same from your associates when they are not, you become an object of ridicule).  

ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು ಆದರೆ ಅದು ಬರಿ ಉದಾಹರಣೆಯಾಗಿ ಉಳಿಯದೆ ಅದರಿಂದ ತಮ್ಮ ತಮ್ಮ ತಪ್ಪುಗಳನ್ನು ಅರಿತು ತಿದ್ದಿ ನಡೆದರೆ ನಮ್ಮ ಜೀವನದ ಮುಂದಿನ ಹಂತವು ಶಿಸ್ತು ಬದ್ಧವಾಗಿ, ಮಾದರಿಯಾಗಿ ರೂಪುಗೊಳ್ಳುತ್ತದೆ.           

2 comments:

  1. Wonderfully explained, thats how our society is running now.

    ReplyDelete
  2. Sir, its a pity that people do not understand the reality.

    ReplyDelete